2028ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಖಚಿತ: ಸಿಎಂ ಡಿ ಕೆ ಶಿವಕುಮಾರ್ ಭವಿಷ್ಯ

ಬೆಂಗಳೂರು : “2028ಕ್ಕೆ ಕರ್ನಾಟಕದಲ್ಲಿ ಹಾಗೂ 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದಕ್ಕೆ ದೇಶದ ಕಾರ್ಮಿಕರ, ಜನಸಾಮಾನ್ಯರ ಬೆಂಬಲ ಇರಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕಾಂಗ್ರೆಸ್ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ಭಾನುವಾರ ನಡೆದ ಎಐಟಿಯುಸಿ (ಇಂಟೆಕ್) 316 ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಇಂಟೆಕ್ ಮೂಲಕ ದೇಶದ ಶ್ರಮಿಕರ, ಕಾರ್ಮಿಕರ ಬಲ ಹೆಚ್ಚಾಗಿದೆ. ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಇಂಟೆಕ್ ಸದಸ್ಯರು ಮುಖ್ಯವಾಗುತ್ತಾರೆ. ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಇಂಟೆಕ್, ಎನ್ ಎಸ್ ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಇವು ಕಾಂಗ್ರೆಸ್ ಪಕ್ಷದ ನಾಲ್ಕು ಆಧಾರ ಸ್ಥಂಭಗಳು ಎಂದು ಹೇಳಿದ್ದರು. ನಾನು ವಿದ್ಯಾರ್ಥಿ ನಾಯಕನಾಗಿ ನಂತರ ಮುಖ್ಯವಾಹಿನಿ ರಾಜಕೀಯಕ್ಕೆ ಬಂದವನು. ನನಗೆ ಸಂಘಟನೆಯ ಶಕ್ತಿಯ ಬಗ್ಗೆ ಅರಿವಿದೆ” ಎಂದರು.

ಕಾರ್ಮಿಕರಿಲ್ಲದೇ ದೇಶದ ಆರ್ಥಿಕ ಪ್ರಗತಿ ಅಸಾಧ್ಯ

“ಕೃಷಿಕ, ಶಿಕ್ಷಕ, ಸೈನಿಕ, ಕಾರ್ಮಿಕ ಇವರುಗಳು ಇಲ್ಲದೇ ಸಮಾಜ ಮುನ್ನಡೆಯದು. ಈ ದೇಶಕ್ಕೆ ಕಾರ್ಮಿಕರ ಶ್ರಮ, ಶಕ್ತಿ, ಬದ್ಧತೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಕಾರ್ಮಿಕ ಇಲ್ಲದೇ ಹೋದರೆ ಯಾವುದೇ ದೇಶದ ಆರ್ಥಿಕತೆ ಬೆಳೆಯುವುದಿಲ್ಲ. ಉದ್ದಿಮೆದಾರರು ಪ್ರಬಲರಾದರೆ ಕಾರ್ಮಿಕರೂ ಬಲವಾಗುತ್ತಾರೆ.‌ ಜೊತೆಗೂಡಿದರೆ ಆರಂಭ, ನಂತರ ಪ್ರಗತಿ” ಎಂದರು.

ಕರ್ನಾಟಕದಲ್ಲಿ ಎಸ್ಐಆರ್ ಪ್ರಾರಂಭ

“ಜೂನ್ 30 ರಿಂದ ಎಸ್ ಐಆರ್ ಪ್ರಾರಂಭ ಆಗುತ್ತಿದೆ.‌ ಬಿಜೆಪಿ ಮತಗಳನ್ನು ಡಿಲೀಟ್ ಮಾಡಿಸುತ್ತಿದೆ. ಈ ದೇಶದ ಶ್ರಮಿಕರ, ಕಾರ್ಮಿಕರ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಕಾರ್ಮಿಕರಿಂದ ಹಿಡಿದು ಎಲ್ಲರೂ ಇದರ ಬಗ್ಗೆ ಎಚ್ಚರದಿಂದ ಇರಬೇಕು. ಮತಗಳು ಡಿಲೀಟ್ ಆಗದಂತೆ ಎಚ್ಚರವಹಿಸಬೇಕು” ಎಂದರು.

“ಸಂಜೀವ್ ರೆಡ್ಡಿ ಅವರು ಸಾಕಷ್ಟು ವರ್ಷದಿಂದ ಈ ಸಂಘಟನೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಆಸ್ಕರ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಕ್ರಾಂತಿಕಾರಿ ಬದಲಾವಣೆ ತಂದರು. ಕಾರ್ಮಿಕ ಚಳುವಳಿಗೆ ಮಾನ್ಯತೆ ನೀಡಿದರು. ಕಾರ್ಮಿಕರಿಗಾಗಿ ಇಎಸ್ ಐ ಆಸ್ಪತ್ರೆ ತಂದರು.‌ ಕಾರ್ಮಿಕರ ಮಕ್ಕಳಿಗಾಗಿ ಇಎಸ್ ಐ ಆಸ್ಪತ್ರೆಗಳಲ್ಲಿ ಉಚಿತ ಮೆಡಿಕಲ್ ಸೀಟುಗಳನ್ನು ನೀಡಲಾಯಿತು. 10-15 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಇಬ್ಬರ ನೇತೃತ್ವದಲ್ಲಿ ಕಾರ್ಮಿಕರ ಜೀವನದಲ್ಲಿ ಬದಲಾವಣೆ ಪ್ರಾರಂಭವಾಯಿತು‌. ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ.

ಕಾರ್ಮಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳು ಜಾರಿ”

“ನಾನು ಸರ್ಕಾರದ ಪ್ರತಿನಿಧಿಯಾಗಿದ್ದೇನೆ. ನಾನು ಎಂದಿಗೂ ನಿಮ್ಮ ಪರವಾಗಿ, ಕಾರ್ಮಿಕರ ಪರವಾಗಿ ಇರುತ್ತೇನೆ.‌ ನಾವು ತಂದಿರುವ ಐದು ಗ್ಯಾರಂಟಿ ಯೋಜನೆಗಳು ಕಾರ್ಮಿಕರ, ಮಹಿಳೆಯರ ಹಾಗೂ ಜನಸಾಮಾನ್ಯರ ಪರವಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿಯವರಿಂದ ಹಿಡಿದು ಎಲ್ಲರೂ ಟೀಕೆ ಮಾಡಿದರು. ದೇಶದಲ್ಲಿ ಬೆಲೆಏರಿಕೆ ಆಗಿದ್ದರಿಂದ ನಮ್ಮ ಗ್ಯಾರಂಟಿ ಯೋಜನೆಗಳು ಜನರ ಹಿತಕ್ಕಾಗಿ ಜಾರಿಗೆ ತರಲಾಯಿತು. 50 ಸಾವಿರ ಕೋಟಿಗೂ ಹೆಚ್ಚು ಹಣ ಪ್ರತಿ ವರ್ಷ ಖರ್ಚು ಮಾಡಲಾಗುತ್ತಿದೆ. ಟೀಕೆ ಮಾಡಿದವರೇ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ” ಎಂದರು.

“ನನ್ನ ಮೇಲೆ ನಂಬಿಕೆಯನ್ನಿಟ್ಟು ಸರ್ಕಾರದ ಜವಾಬ್ದಾರಿ ನೀಡಲಾಗಿದೆ. ನಾನು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ. 6 ವರ್ಷಗಳ ಹಿಂದೆ ಕಷ್ಟಕಾಲದಲ್ಲಿ ಪಕ್ಷದ ನೇತೃತ್ವವಹಿಸಿಕೊಂಡೆ. ಕಾಂಗ್ರೆಸ್ ಪಕ್ಷದ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಜವಹರಲಾಲ್ ನೆಹರು ಅವರ ಕಾಲದಿಂದಲೂ ಕಾಂಗ್ರೆಸ್ ಪಕ್ಷ ದೇಶವನ್ನು ಕಟ್ಟಲು ಶ್ರಮಿಸಿದೆ. ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳನ್ನು ಕೊಟ್ಟಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸಿದೆ” ಎಂದರು.

“ಇಂದು ನಮ್ಮ ದೇಶ ವಿಚಿತ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಾವು ನಮ್ಮ‌ ನೆರೆಹೊರೆಯ ಮಿತ್ರ ರಾಷ್ಟ್ರಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಕರ್ನಾಟಕ ಸದೃಢವಾಗಿದೆ. ವಿವಿಧ ತೆರಿಗೆಗಳ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ. ಭಾರತವನ್ನು ಬೆಂಗಳೂರು ಮೂಲಕ ನೋಡಲಾಗುತ್ತಿದೆ‌. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಇದ್ದಾರೆ” ಎಂದರು.

“ನಾವೆಲ್ಲರೂ ಒಟ್ಟಾಗಿ ಸಾಗೋಣ, ಕೆಲಸ ಮಾಡೋಣ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸೋಣ” ಎಂದು ಕರೆ ನೀಡಿದರು.

Share it :

Leave a Reply

Your email address will not be published. Required fields are marked *