ಗ್ರಾಮೀಣ ಯುವಜನತೆಗೆ AI ತಂತ್ರಜ್ಞಾನದ ಸ್ಪರ್ಶ: ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

​ಚಿಕ್ಕಬಳ್ಳಾಪುರ : ಕೃತಕ ಬುದ್ಧಿಮತ್ತೆ (Artificial Intelligence – AI) ರೂಪದ ಆಧುನಿಕ ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಐ.ಎ.ಎಸ್. ತಿಳಿಸಿದರು.

​ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ‘ಸತ್ಯಸಾಯಿ ಗ್ರಾಮ’ದಲ್ಲಿ ಏರ್ಪಡಿಸಲಾಗಿದ್ದ ‘ರೂರಲ್ ಶೋರ್ಸ್ AI ಕೌಶಲ್ಯ ಮತ್ತು ಅನುಭವ ಕೇಂದ್ರ’ (RuralShores AI Skilling and Experience Centre) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ AI ನಂತಹ ಆಧುನಿಕ ತಂತ್ರಜ್ಞಾನಕ್ಕೆ ಕರುಣೆ, ನೈತಿಕತೆ ಮತ್ತು ಸದ್ಗುಣಗಳ ಸ್ಪರ್ಶವಿರಬೇಕು. ತಂತ್ರಜ್ಞಾನವು ಮಾನವನ ಬುದ್ಧಿವಂತಿಕೆ ಮತ್ತು ಸದ್ಗುಣಗಳನ್ನು ಹೆಚ್ಚಿಸುವಂತಿರಬೇಕು. ಸತ್ಯಸಾಯಿ ಗ್ರಾಮದಂತಹ ಪವಿತ್ರ ಹಾಗೂ ಸೇವಾ ಮನೋಭಾವದ ವಾತಾವರಣದಲ್ಲಿ ಈ ಕೇಂದ್ರ ಪ್ರಾರಂಭವಾಗಿರುವುದು ಅತ್ಯಂತ ಸೂಕ್ತವಾಗಿದೆ,” ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಯುವಕರ ಸಬಲೀಕರಣ :

“ರೂರಲ್ ಶೋರ್ಸ್ ಸಂಸ್ಥೆಯು ಕಳೆದ 18 ವರ್ಷಗಳಿಂದ ಗ್ರಾಮೀಣ ಭಾಗದ ಯುವಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಅವರು ಇದ್ದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ.

ಈವರೆಗೆ ಸುಮಾರು 30,000 ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡಿರುವುದು ಮತ್ತು ಅಮೆರಿಕದಲ್ಲೂ ‘ಪೀಪಲ್‌ಶೋರ್ಸ್’ ಮೂಲಕ ಸುಮಾರು 500 ಯುವತಿಯರು/ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವುದು ಹೆಮ್ಮೆಯ ವಿಷಯ,” ಎಂದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವೆಗೆ ಶ್ಲಾಘನೆ:

“ಉಚಿತ ಶಿಕ್ಷಣ, ಉಚಿತ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದ ಸೇವಾ ಕಾರ್ಯಗಳು ಅದ್ಭುತವಾಗಿವೆ. ಭಾರತದ ಪ್ರಥಮ ಸಂಪೂರ್ಣ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು (ಶ್ರೀ ಮಧುಸೂದನ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಸೇರಿದಂತೆ ಅನೇಕ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಮಾದರಿಯಾಗಿದೆ,” ಎಂದು ತಿಳಿಸಿದರು.

ತಂತ್ರಜ್ಞಾನ ರಾಜಧಾನಿಯಾಗಿ ಕರ್ನಾಟಕದ ಕೊಡುಗೆ:

“ಕರ್ನಾಟಕವು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಬೆಳೆಯುತ್ತಿದ್ದು, ಇಂತಹ AI ಕೌಶಲ್ಯ ಕೇಂದ್ರಗಳು ಗ್ರಾಮೀಣ ಯುವಕರನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸಲಿವೆ. ಭಾರತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ವಹಿಸಲು ಗ್ರಾಮೀಣ ಭಾಗದ ಪ್ರತಿಭೆಗಳ ಕೊಡುಗೆ ಅಪಾರವಾಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

​ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಜಿ, ರೂರಲ್ ಶೋರ್ಸ್ ಸಂಸ್ಥೆಯ ನಿರ್ದೇಶಕರು, ಗಣ್ಯರು, ದೇಶ-ವಿದೇಶಗಳ ಭಕ್ತಾದಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others