B.Y Vijayendra: ಕಾವೇರಿ ನದಿ ನೀರಿನ ವಿಚಾರದಲ್ಲಿ ಸಿಎಂ ಡಿ.ಕೆ.ಶಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ- ಬಿವೈವಿ

ಬೆಂಗಳೂರು: ಮುಂದಿನ 2028ರ ಚುನಾವಣೆಯಲ್ಲಿ ಕೈ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಿದ್ದರಾಮಯ್ಯನವರ ನಿರ್ಧಾರದಿಂದ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿದೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ ಎಂದರು.

ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಸಿಡಬ್ಲ್ಯುಆರ್‍ಸಿ ಸೂಚನೆಗೂ ಮೊದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ. ಸಿಡಬ್ಲ್ಯುಆರ್‍ಸಿ ತೀರ್ಪಿನ ಕಾರಣ ರಾಜ್ಯವು ಹೆಚ್ಚು ನೀರನ್ನು ಬಿಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಾವೇರಿ ನದಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸಿಡಬ್ಲ್ಯುಆರ್‍ಸಿಯಲ್ಲಿ ವಾದ ಮಾಡುವ ನಮ್ಮ ವಕೀಲರು ಮತ್ತು ನ್ಯಾಯವಾದಿಗಳು ಇಲ್ಲಿನ ನೀರಿನ ಲಭ್ಯತೆ ವಿಚಾರದಲ್ಲಿ ಸಮಗ್ರ ಮಾಹಿತಿ ಕೊಡುವಲ್ಲಿ ವಿಫಲವಾಗಿದ್ದಾರೆ ಎಂದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮಾತನಾಡಿ, ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟ ನಡೆಸುತ್ತೇವೆ. ಆ ಭಾಗದ ರೈತರು, ರೈತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಹೇಳಿದ್ದಾರೆ.

ಕಾವೇರಿ ನೀರು ನಿರ್ವಾಹಣಾ ಸಮಿತಿ ತೀರ್ಪು ನೀಡಿದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಆ ತೀರ್ಪು ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಬರ ಪರಿಸ್ಥಿತಿ ಇದೆ, ಯಾರು ಕೂಡ ಬೆಳೆ ಬೆಳೆಯಬೇಡಿ ಎಂದು ಸಿಎಂ ಕೆಲವು ದಿನದ ಹಿಂದೆ ಕರೆ ಕೊಟ್ಟಿದ್ದರು. ರಾಜ್ಯದ ರೈತರಿಗೆ ಸಿಎಂ ಧೈರ್ಯ ತುಂಬಬೇಕಿತ್ತು. ಅವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಾರೆ ಎಂದರು.

ಡ್ಯಾಂನಲ್ಲಿ 17.39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್. ಉಳಿದ 12-13 ಟಿಎಂಸಿ ನೀರಲ್ಲಿ ತಮಿಳುನಾಡಿಗೆ ಬಿಟ್ಟರೇ ರಾಜ್ಯದ ರೈತರ ಗತಿಯೇನು? ಸಿಎಂ ಯಾಕೇ ಆ ಭಾಗದ ರೈತರ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಸಮಿತಿ ಮುಂದೆ ಸರಿಯಾದ ರೀತಿ ವಾದ ಮಾಡಬೇಕು ಎಂದು ಆಗ್ರಹಿಸಿದರು.

ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಗಳನ್ನು ಖುಷಿ ಪಡಿಸಲು ರಾಜ್ಯದ ರೈತರಿಗೆ ಸಿಎಂ ಅನ್ಯಾಯ ಮಾಡಿದ್ದರು. ಯಾಕೇ ಇಂತಹ ಕಪಟ ನಾಟಕ ಮಾಡುತ್ತಿದ್ದೀರಿ? ಸಿಎಂ ಯಾಕೆ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ? ಈ ಚೆಲ್ಲಾಟ ಆಡೋದು ಬಿಟ್ಟು, ಸಮಿತಿಗೆ ಮರು ಪರಶೀಲನಾ ಅರ್ಜಿ ದಾಖಲಿಸಬೇಕು ಎಂದು ಕಿಡಿಕಾರಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others