ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಗೆ ಅವಮಾನಿಸಿದರೆ ಶಿಕ್ಷೆ ತಿದ್ದುಪಡಿ ಮಸೂದೆ ಅಂಗೀಕಾರ!

ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ಅವಮಾನ ಮಾಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಪ್ರಮುಖ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡಿದೆ. ಜುಲೈ 29 ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ, 2026’ ಕ್ಕೆ ಬುಧವಾರ ಲೋಕಸಭೆಯೂ ತನ್ನ ಒಪ್ಪಿಗೆ ಸೂಚಿಸಿದೆ.

ಲೋಕಸಭೆಯಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ವಿಪಕ್ಷಗಳು ತೀವ್ರ ಗದ್ದಲ ನಡೆಸಿದವು. ಈ ಗದ್ದಲದ ನಡುವೆಯೇ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಸಂಸತ್ತಿನ ಎರಡೂ ಮನೆಗಳಲ್ಲಿ ವಿಧೇಯಕ ಅಂಗೀಕಾರಗೊಂಡಿರುವುದರಿಂದ, ಇದು ಈಗ ಕಾಯ್ದೆಯಾಗಿ ಜಾರಿಗೆ ಬರಲು ಹಾದಿ ಸುಗಮವಾಗಿದೆ.

ವಿಧೇಯಕದ ಪ್ರಮುಖ ಅಂಶಗಳು: ಈ ಹೊಸ ತಿದ್ದುಪಡಿಯು 1971ರ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಗೆ’ ತಿದ್ದುಪಡಿ ತರಲಿದೆ. ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯಂತೆ ರಾಷ್ಟ್ರಧ್ವಜ, ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ (ಜನ ಗಣ ಮನ) ಅವಮಾನ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಇದೀಗ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಕೂಡ ಈ ವ್ಯಾಪ್ತಿಗೆ ತರಲಾಗಿದ್ದು, ಇನ್ಮುಂದೆ ಈ ಗೀತೆಗೆ ಅವಮಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ: ಜುಲೈ 24 ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಈ ವಿಧೇಯಕದ ಕುರಿತು ಜುಲೈ 29 ರಂದು ನಡೆದ ಸುದೀರ್ಘ ಚರ್ಚೆಯ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಸದನದಿಂದ ಹೊರನಡೆದರು.

ವಿಧೇಯಕದ ಕುರಿತು ಮೇಲ್ಮನೆಯಲ್ಲಿ ಮಾತನಾಡಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ, “ಈ ವಿಧೇಯಕವು ದೇಶದ ಗೌರವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ವಂದೇ ಮಾತರಂ ಗೀತೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಷ್ಟ್ರೀಯ ಪ್ರಜ್ಞೆಯ ಸಂಕೇತವಾಗಿದೆ” ಎಂದು ಪ್ರತಿಪಾದಿಸಿದರು.

ಕಳೆದ ಒಂದು ವಾರದಿಂದ ನೀಟ್ ಪರೀಕ್ಷಾ ಅಕ್ರಮದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಪ್ರತಿಭಟನೆ ಹಾಗೂ ಗದ್ದಲ ನಡೆಯುತ್ತಿದ್ದು, ಇದರ ನಡುವೆಯೇ ಈ ಪ್ರಮುಖ ಮಸೂದೆಗೆ ಸಂಸತ್ತಿನ ಅಂತಿಮ ಅನುಮೋದನೆ ದೊರೆತಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others