ಮಹಾರಾಷ್ಟ್ರ : ‘ಲಗಾನ್’ ಹಾಗೂ ‘ಗಜಿನಿ’ ಸಿನಿಮಾಗಳಲ್ಲಿನ ತಮ್ಮ ನಟನೆಯ ಮೂಲಕ ದೇಶಾದ್ಯಂತ ಅಪಾರ ಪ್ರಸಿದ್ದಿ ಪಡೆದಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ರಕ್ತದ ಕ್ಯಾನ್ಸರ್ನಿಂದ (Blood Cancer) ಬಳಲುತ್ತಿದ್ದ ಅವರು, ಭಿವಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
5 ವರ್ಷಗಳ ಕಾಲ ಕ್ಯಾನ್ಸರ್ ಹೋರಾಟ:
ಕಳೆದ ಐದು ವರ್ಷಗಳಿಂದ ಪ್ರದೀಪ್ ರಾವತ್ ಅವರು ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಈ ಕುರಿತು ‘ಇಂಡಿಯಾ ಟುಡೇ’ ಜೊತೆ ಮಾಹಿತಿ ಹಂಚಿಕೊಂಡಿರುವ ಅವರ ಬಿಸಿನೆಸ್ ಮ್ಯಾನೇಜರ್ ಸಿದ್ಧಾರ್ಥ್ ತಿವಾರಿ, “ಪ್ರದೀಪ್ ಅವರು ಆರಂಭದಲ್ಲಿ ಚೇತರಿಸಿಕೊಂಡಿದ್ದರು. ಆದರೆ ಕೆಲವು ತಿಂಗಳುಗಳ ಹಿಂದೆ ಕ್ಯಾನ್ಸರ್ ಮತ್ತೆ ಮರುಕಳಿಸಿತು. ಕಳೆದ ಎರಡು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಮಂಗಳವಾರ ಸಂಜೆ ತೀವ್ರವಾಗಿ ಕ್ಷೀಣಿಸಿ ಮೃತಪಟ್ಟಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಅಂತ್ಯಕ್ರಿಯೆ:
ಪ್ರದೀಪ್ ರಾವತ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ಬುಧವಾರ ನಡೆಯುವ ಸಾಧ್ಯತೆಯಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
‘ಲಗಾನ್’ ಸಹನಟ ಯಶ್ಪಾಲ್ ಶರ್ಮಾ ಸಂತಾಪ:
‘ಲಗಾನ್’ ಚಿತ್ರದ ಸಹನಟ ಯಶ್ಪಾಲ್ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. “ನಮ್ಮ ಗಜಿನಿ, ಲಗಾನ್ ಚಿತ್ರದ ‘ದೇವ್’ ಪ್ರದೀಪ್ ರಾವತ್ ಅವರು ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡು ಶೋಕ ವ್ಯಕ್ತಪಡಿಸಿದ್ದಾರೆ





