ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ ಅಂತ್ಯ: ಅರ್ಜಿ ಹಿಂಪಡೆದ ಪತ್ನಿ ಸಂಗೀತಾ

ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ನಾಯಕ, ನಟ ಸಿ. ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ತಾವು ಚಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿವಾಹ ವಿಚ್ಛೇದನ (Divorce) ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇದರೊಂದಿಗೆ ಸುದೀರ್ಘ ಕೌಟುಂಬಿಕ ಹಾಗೂ ಕಾನೂನು ಸಮರಕ್ಕೆ ದಿಢೀರ್ ತೆರೆಬಿದ್ದಿದೆ.

ಪ್ರಕರಣದ ಹಿನ್ನೆಲೆ ಹಾಗೂ ಆರೋಪಗಳು: 1999ರಲ್ಲಿ ವಿವಾಹವಾಗಿದ್ದ ವಿಜಯ್ ಹಾಗೂ ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ಸಂಗೀತಾ ಅವರು 2026ರ ಫೆಬ್ರವರಿಯಲ್ಲಿ ಚಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದು, ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಡೆಗಣಿಸಿದ್ದಾರೆ ಎಂದು ಅರ್ಜಿಯಲ್ಲಿ ತೀವ್ರ ಆರೋಪಗಳನ್ನು ಮಾಡಲಾಗಿತ್ತು.

ಕೋರ್ಟ್‌ ತೀರ್ಪು ಹಾಗೂ ಅರ್ಜಿ ವಾಪಸಾತಿ: ಏಪ್ರಿಲ್ ಮತ್ತು ಜೂನ್‌ನಲ್ಲಿ ನಡೆದ ಹಂತ-ಹಂತದ ವಿಚಾರಣೆಗಳ ಬಳಿಕ, ನ್ಯಾಯಾಲಯವು ಆಗಸ್ಟ್ 7ರ ಶುಕ್ರವಾರದಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತ್ತು. ವಿಚಾರಣೆ ವೇಳೆ ಸಂಗೀತಾ ಅವರು ತಾವು ಈ ಪ್ರಕರಣವನ್ನು ಮುಂದೆ ತೆಗೆದುಕೊಂಡು ಹೋಗಲು ಇಷ್ಟಪಡುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿ ಅರ್ಜಿಯನ್ನು ಹಿಂಪಡೆದರು.

ಸಂಗೀತಾ ಅವರ ಮನವಿಯನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣವನ್ನು ವಜಾಗೊಳಿಸಿ, ರದ್ದುಗೊಳಿಸಿ (Disposed) ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಮಿಳುನಾಡಿನ ರಾಜಕೀಯ ಮತ್ತು ಚಿತ್ರರಂಗದ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹೈಪ್ರೊಫೈಲ್ ವಿಚ್ಛೇದನ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿ, ಸಂಪೂರ್ಣ ಅಂತ್ಯವಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others