ಮೃತಪಟ್ಟ ಕೋಳಿಗಳಿಗೂ ಪರಿಹಾರ ನೀಡಬೇಕು – ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಕೋಳಿಗಳು ಮೃತಪಟ್ಟರೆ ಅವುಗಳನ್ನು ‘ಸರಕು’ ಹಾಗೂ ‘ಜೀವಸಂಪತ್ತು’ ಎಂದೇ ಪರಿಗಣಿಸಬೇಕು. ಆದ್ದರಿಂದ ಅವುಗಳ ಸಾವಿನಿಂದ ಉಂಟಾಗುವ ನಷ್ಟಕ್ಕೆ ವಿಮಾ ಕಂಪನಿಯು ಸೂಕ್ತ ಪರಿಹಾರವನ್ನು ಪಾವತಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಬಳ್ಳಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಸರಕು ವಾಹನದಲ್ಲಿ ಸಾಗಿಸಲಾಗುತ್ತಿದ್ದ ಸಾವಿರಾರು ಕೋಳಿಗಳು ಮೃತಪಟ್ಟಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಬಳ್ಳಾರಿಯ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣವು, ನಷ್ಟ ಅನುಭವಿಸಿದ ಕೋಳಿಗಳ ಮಾಲೀಕ ಕೆ. ವೀರನಾರಾಯಣಸ್ವಾಮಿ ಅವರಿಗೆ 4,51,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು.

ವಿಮಾ ಕಂಪನಿ ಮತ್ತು ಮಾಲೀಕರ ಮೇಲ್ಮನವಿ: ಈ ಆದೇಶವನ್ನು ಪ್ರಶ್ನಿಸಿ ‘ರಿಲಯನ್ಸ್ ಜನರಲ್ ಇನ್ಸೂರೆನ್ಸ್’ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. “ಕೋಳಿಗಳು ಜಾನುವಾರು ಅಥವಾ ಜೀವಸಂಪತ್ತಿನ ವ್ಯಾಪ್ತಿಗೆ ಬರುವುದಿಲ್ಲ, ಆದ್ದರಿಂದ ವಿಧಿಸಲಾಗಿರುವ ಪರಿಹಾರದ ಮೊತ್ತವನ್ನು ಕಡಿಮೆ ಮಾಡಬೇಕು” ಎಂದು ವಿಮಾ ಕಂಪನಿಯ ಪರ ವಕೀಲರು ವಾದ ಮಂಡಿಸಿದ್ದರು.

ಮತ್ತೊಂದೆಡೆ, ಕೋಳಿಗಳ ಮಾಲೀಕ ವೀರನಾರಾಯಣಸ್ವಾಮಿ ಅವರು “ಅಪಘಾತದಲ್ಲಿ ಹೆಚ್ಚಿನ ಕೋಳಿಗಳು ಸತ್ತರೆ, ಉಳಿದ ಕೋಳಿಗಳನ್ನು ಸಾರ್ವಜನಿಕರು ಕೊಂಡೊಯ್ದಿದ್ದಾರೆ. ಇದರಿಂದ ತಮಗೆ ತೀವ್ರ ಮಾನಸಿಕ ಹಾಗೂ ಆರ್ಥಿಕ ನಷ್ಟವಾಗಿದ್ದು, ಹೆಚ್ಚುವರಿ ಪರಿಹಾರ ನೀಡಬೇಕು” ಎಂದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಪೀಠದ ಆದೇಶ: ಧಾರವಾಡ ಪೀಠದಲ್ಲಿ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ.

“ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳಲ್ಲಿ ಕೋಳಿಗಳ ಬಗ್ಗೆ ನಿರ್ದಿಷ್ಟವಾಗಿ ನಮೂದಿಸದಿದ್ದರೂ, ಮೋಟಾರು ವಾಹನ ಕಾಯಿದೆ-1988ರ ಸೆಕ್ಷನ್ 2(13)ರ ಪ್ರಕಾರ ‘ಸರಕು’ (Goods) ಎಂಬ ಪದವು ಜೀವಸಂಪತ್ತನ್ನೂ ಒಳಗೊಳ್ಳುತ್ತದೆ. ಕೋಳಿಗಳಿಗೂ ಜೀವವಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸುವುದು ಕಾನೂನುಬದ್ಧವಾಗಿದೆ. ಆದ್ದರಿಂದ ಅಪಘಾತದಲ್ಲಿ ಸತ್ತ ಕೋಳಿಗಳಿಗೆ ವಿಮಾ ಸಂಸ್ಥೆಯು ಪರಿಹಾರ ಕೊಡುವುದು ಕಡ್ಡಾಯ” ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others