ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲ ಸಂಪೂರ್ಣ ನಿಷೇಧ: ಸರ್ಕಾರದಿಂದ ಆದೇಶ

ಬೆಂಗಳೂರು: ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆ ಜಾರಿಗೊಳಿಸಿದೆ.

ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ನಿಷೇಧಿತ ತಂಬಾಕು ಮತ್ತು ನಿಕೋಟಿನ್‌ಯುಕ್ತ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟದ ವಿರುದ್ಧ ಆಹಾರ ಭದ್ರತಾ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ವಿಶೇಷ ಪರಿಶೀಲನೆ ಹಾಗೂ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

ಒಂದು ವರ್ಷದ ಅವಧಿಗೆ ನಿಷೇಧ ಜಾರಿ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2)(ಎ) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ-2011 ರ ನಿಯಮ 2.3.4 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿ, ಆಗಸ್ಟ್ 10, 2026 ರಂದು ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ನಿಷೇಧವು ಅಧಿಸೂಚನೆ ಹೊರಬಿದ್ದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ.

ಯಾವುದೇ ಪ್ರದೇಶದಲ್ಲಿ ನಿಷೇಧಿತ ತಂಬಾಕು ಅಥವಾ ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಮಾರಾಟ ಮತ್ತು ವಿತರಣೆ ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಇಲಾಖೆ ಮನವಿ ಮಾಡಿದೆ.

ಪಾನ್ ಮಸಾಲ ಪ್ಯಾಕೇಜಿಂಗ್ ನಿಯಮ ಬಿಗಿಗೊಳಿಸಿದ ಎಫ್‌ಎಸ್‌ಎಸ್‌ಎಐ (FSSAI) ಇನ್ನೊಂದೆಡೆ, ಭಾರತೀಯ ಆಹಾರ ಭದ್ರತೆ ಮತ್ತು ಮಾನಕಗಳ ಪ್ರಾಧಿಕಾರವು (FSSAI) ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಬಳಸುವ ವಸ್ತುಗಳ ಕುರಿತು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಆಹಾರ ಭದ್ರತೆ ಮತ್ತು ಮಾನಕಗಳ (ಪ್ಯಾಕೇಜಿಂಗ್) ತಿದ್ದುಪಡಿ ನಿಯಮಾವಳಿ-2026 ರ ಪ್ರಕಾರ, ಪಾನ್ ಮಸಾಲ ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಲ್ಯಾಮಿಲೇಟೆಡ್ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕಾಗದ, ಪೇಪರ್‌ಬೋರ್ಡ್, ಸೆಲ್ಯುಲೋಸ್ ಮತ್ತು ಇತರ ನೈಸರ್ಗಿಕ ವಸ್ತುಗಳನ್ನು ಮಾತ್ರ ಪ್ಯಾಕೇಜಿಂಗ್‌ಗೆ ಬಳಸಲು ಅನುಮತಿಸಲಾಗಿದೆ. ಆದರೆ ಇವುಗಳು ಪ್ಲಾಸ್ಟಿಕ್, ಸಿಂಥೆಟಿಕ್ ಪಾಲಿಮರ್‌ಗಳು, ಅಲ್ಯೂಮಿನಿಯಂ ಫಾಯಿಲ್ ಅಥವಾ ಮೆಟಲೈಸ್ಡ್ ಲೇಯರ್‌ಗಳಿಂದ ಮುಕ್ತವಾಗಿರಬೇಕು. ಇದರೊಂದಿಗೆ ಟಿನ್ ಮತ್ತು ಗಾಜಿನ ಕಂಟೇನರ್‌ಗಳನ್ನು ಪ್ಯಾಕೇಜಿಂಗ್‌ಗೆ ಬಳಸಲು ಅನುಮತಿ ನೀಡಲಾಗಿದ್ದು, ಈ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others