ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ SIR ಪ್ರಕ್ರಿಯೆಯಲ್ಲಿ ತಮ್ಮ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲಾಗಿದೆ ಎಂದು ನಟ ಪ್ರಕಾಶ್ ರಾಜ್ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ತಾವು ಹುಟ್ಟಿ ಬೆಳೆದ ಬೆಂಗಳೂರಿನಲ್ಲೇ ಮತದಾನದ ಹಕ್ಕಿಗೆ ಕತ್ತರಿ ಹಾಕಲಾಗಿದೆ ಎಂದು ವಿಡಿಯೋ ಮೂಲಕ ಕಿಡಿಕಾರಿದ್ದಾರೆ ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು? ಎಂದು ಬಿಜೆಪಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕೈ ಬಿಟ್ಟಿದ್ದಕ್ಕೆ ವಿಡಿಯೋಂದನ್ನು ಮಾಡಿ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿ ಹಲವು ಪ್ರಶ್ನೆ ಮಾಡಿದ್ದಾರೆ.
ವಿಷಯ ಕೈಮೀರಿ ಹೋದ ತಕ್ಷಣ ರಾತ್ರಿ 8:30ಕ್ಕೆ ಬಿಎಲ್ಒ ನೌಕರರನ್ನು ಕ್ಯಾಮೆರಾದೊಂದಿಗೆ ನನ್ನ ಹಳೆಯ ಮನೆ ವಿಳಾಸಕ್ಕೆ ಕಳುಹಿಸಿ, ನೆರೆಹೊರೆಯವರನ್ನು ಕರೆದು ಮಹಜರು ನಡೆಸುವ ನಾಟಕ ಮಾಡಿದಿರಿ ನೀವು ನಂತರ ಅದನ್ನು ಗೋದಿ ಮೀಡಿಯಾ ಹಾಗೂ ಬಿಜೆಪಿ ಹ್ಯಾಂಡಲ್ಗಳಿಗೆ ನೀಡಿ ಪ್ರಕಾಶ್ ರಾಜ್ ಹೇಳಿದ್ದು ತಪ್ಪು ಎಂದು ಬಿಂಬಿಸಲು ಯತ್ನಿಸಿದಿರಿ ಎಂದು ತಿಳಿಸಿದ್ದಾರೆ.
ನಾನು ನನ್ನ ವೃತ್ತಿಯಿಂದಾಗಿ ನಟ/ಸೆಲೆಬ್ರಿಟಿಯಾಗಿರಬಹುದು. ಆದರೆ ಈ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ನಾನು ಸಮಾನ. ಈ ಹೋರಾಟ ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟವಾಗಿದೆ.
ನಿಮ್ಮ ವೆಬ್ಸೈಟ್ನಲ್ಲಿ ನನ್ನ ಮತದಾರರ ಗುರುತಿನ ಚೀಟಿ ಖಾಯಂ ಆಗಿ ವರ್ಗಾವಣೆಯಾಗಿದೆ ಹಾಗಾಗಿ ಫಾರ್ಮ್ 6 ಭರ್ತಿ ಮಾಡಿ ಹೊಸ ಐಡಿಗೆ ಅರ್ಜಿ ಸಲ್ಲಿಸಿ ಎಂದು ತೋರಿಸಿದ್ದು ನಿಜವಲ್ಲವೇ? ಈ ವಿಷಯ ನಾನು ಪ್ರಸ್ತಾಪಿಸಿ ಲಕ್ಷಾಂತರ ಜನರಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ನನಗೆ ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವಿನಂತಿಸಿದ್ದು ಹೌದಲ್ಲವೇ? ಆದರೆ ಅದೇ ದಿನ ಸಂಜೆ ಪ್ರೆಸ್ ಮೀಟ್ ಕರೆದು ಅದು ವರ್ಗಾವಣೆಯಾಗಿದೆ ಡಿಲೀಟ್ ಆಗಿಲ್ಲ ಎಂದು ಸುಳ್ಳು ಹೇಳಿದಿರಿ.
ಐದು ವರ್ಷಕ್ಕೊಮ್ಮೆ ಮತದಾರರ ಮುಂದೆ ಬಂದು ಓಟಿಗಾಗಿ ಕೈಮುಗಿದು ಬೇಡುತ್ತೀರಿ. ಆದರೆ ಈಗ ಅದೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಲಿನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದೀರಲ್ಲಾ? ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ವಿಡಿಯೋ ಮೂಲಕ ಪ್ರಕಾಶ್ ರಾಜ್ ಆರೋಪ ಮಾಡಿದ್ದರು. ಈ ಆರೋಪವನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ತಳ್ಳಿಹಾಕಿ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿತ್ತು ಎನ್ನಲಾಗಿದೆ.





