ಕರ್ನಾಟಕದ ನೂತನ ಸಚಿವರಾಗಿ 19 ಮಂದಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟಕ್ಕೆ ಹೊಸದಾಗಿ 19 ಮಂದಿ ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ರಾಜಧಾನಿಯ ಲೋಕಭವನದಲ್ಲಿ (ರಾಜಭವನ) ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ರಹಸ್ಯಪಾಲನೆಯ ಪ್ರಮಾಣ ವಚನ ಬೋಧಿಸಿದರು. ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಹಾಗೂ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಒಟ್ಟು 19 ನಾಯಕರು ಈ ಕಾರ್ಯಕ್ರಮದಲ್ಲಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.

ದೇವರಿಗೂ ಮಹಾತ್ಮರಿಗೂ ಆಣೆ: ವಿಭಿನ್ನ ಪ್ರಮಾಣ ವಚನ

ನೂತನವಾಗಿ ಸಂಪುಟ ಸೇರಿದ ನಾಯಕರು ತಮ್ಮ ಶ್ರದ್ಧಾಭಕ್ತಿ ಹಾಗೂ ಸಿದ್ಧಾಂತಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಡಾ. ಅಜಯ್ ಸಿಂಗ್, ಹೆಚ್.ಸಿ. ಬಾಲಕೃಷ್ಣ, ಎನ್. ಚೆಲುವರಾಯಸ್ವಾಮಿ, ಲಕ್ಷ್ಮಣ ಸವದಿ, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಬಿ. ನಾಗೇಂದ್ರ, ಪುಟ್ಟರಂಗಶೆಟ್ಟಿ, ಟಿ. ರಘುಮೂರ್ತಿ, ರುದ್ರಪ್ಪ ಲಮಾಣಿ, ಕೆ.ಎಂ. ಶಿವಲಿಂಗೇಗೌಡ ಮತ್ತು ಶಿವರಾಜ್ ತಂಗಡಗಿ ಅವರು ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿದರು. ಮತ್ತೊಂದೆಡೆ, ಶಾಸಕ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ಅಲ್ಲಾಹ್ ಹಾಗೂ ತಮ್ಮ ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ದಾರ್ಶನಿಕರು ಹಾಗೂ ಪ್ರತಿಜ್ಞಾವಿಧಿ

ಕೆಲವು ಸಚಿವರು ನಾಡಿನ ದಾರ್ಶನಿಕರು ಮತ್ತು ಸಂವಿಧಾನ ಶಿಲ್ಪಿಗಳನ್ನು ಸ್ಮರಿಸಿ ಆಣೆ ಮಾಡಿದರು. ಕೆ.ಎಸ್. ಬಸವಂತಪ್ಪ ಅವರು ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ಮಾಡಿದರೆ, ಸಿ.ಎಂ. ನರೇಂದ್ರಸ್ವಾಮಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗಂಗಾಧರಜ್ಜನವರ ಹೆಸರಿನಲ್ಲಿ ಆಣೆ ತಗೆದುಕೊಂಡರು. ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಕೂಡಲಸಂಗಮದ ಬಸವಣ್ಣ, ಪಂಚಪೀಠಾಧಿಪತಿಗಳು, ಬುದ್ಧ, ಅಂಬೇಡ್ಕರ್ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಇನ್ನು ಹಿರಿಯ ನಾಯಕರಾದ ಬಸವರಾಜ ರಾಯರೆಡ್ಡಿ, ರಿಜ್ವಾನ್ ಅರ್ಶದ್ ಹಾಗೂ ಸಂತೋಷ್ ಲಾಡ್ ಅವರು ಯಾವುದೇ ದೇವರ ಅಥವಾ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸದೆ ಕೇವಲ ಸಂವಿಧಾನಬದ್ಧ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ಶೀಘ್ರದಲ್ಲೇ ಇಲಾಖೆ ಹಂಚಿಕೆ

ಈ 19 ಹೊಸ ಸಚಿವರ ಸೇರ್ಪಡೆಯೊಂದಿಗೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಹೊಸ ಬಲ ಬಂದಂತಾಗಿದ್ದು, ಶೀಘ್ರದಲ್ಲೇ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others