ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿಗಳು ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದವು. ಈ ಬೆನ್ನಲ್ಲೇ ಕಂಟಕ ಪರಿಹಾರಕ್ಕಾಗಿ ದೊಡ್ಡಣ್ಣ ಅವರು ತಮ್ಮ ಕುಟುಂಬದವರೊಂದಿಗೆ ಮಹಾಲಕ್ಷ್ಮಿ ಲೇಔಟ್ನ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಡೆದಿದ್ದೇನು? ಶುಕ್ರವಾರ ಬೆಳಗ್ಗೆ ಕಿಡಿಗೇಡಿಗಳ ಗುಂಪೊಂದು ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆಪ್ತರು ಹಾಗೂ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು.
ವಿಡಿಯೋ ಮೂಲಕ ದೊಡ್ಡಣ್ಣ ಸ್ಪಷ್ಟನೆ: ವದಂತಿಗಳು ತೀವ್ರಗೊಳ್ಳುತ್ತಿದ್ದಂತೆ ಸ್ವತಃ ದೊಡ್ಡಣ್ಣ ಅವರೇ ವಿಡಿಯೋ ಬಿಡುಗಡೆ ಮಾಡಿ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. “ನಾನು ಅತ್ಯಂತ ಆರೋಗ್ಯವಾಗಿದ್ದೇನೆ. ಬೆಳಗ್ಗೆ ನಾನು ಎದ್ದೇಳುವ ಮುಂಚೆಯೇ ನನ್ನ ನಿಧನದ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಈ ಸುದ್ದಿ ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.
“ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದ ಇರುವ ತನಕ ನನಗೆ ಏನೂ ಆಗುವುದಿಲ್ಲ. ಆದರೆ ನನ್ನ ಬಗ್ಗೆ ಇಂತಹ ಅಪಪ್ರಚಾರ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇನೆ” ಎಂದು ದೊಡ್ಡಣ್ಣ ಇದೇ ವೇಳೆ ಎಚ್ಚರಿಸಿದ್ದಾರೆ.





