ಸಿಎಂ ಆದ ಮೇಲೆ ಬ್ಲೂ ಫಿಲ್ಮ್ ‌ಮಾಡಿಸುವುದು, ಪೋಸ್ಟರ್ ಅಂಟಿಸುವುದು ಬಿಡುತ್ತಾರೆ ಅಂದುಕೊಂಡಿದ್ದೆ- HDK

ಬೆಂಗಳೂರು: ನಾವು ಬಿಡದಿ ರೈತರ ಪರ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪೋಸ್ಟರ್ ಗಳನ್ನು ಅಂಟಿಸಿ ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ರಾಜ್ಯದ ಮುಖ್ಯಮಂತ್ರಿಯಾದರೂ ಡಿ.ಕೆ. ಶಿವಕುಮಾರ್ ತನ್ನ ಹಳೆಯ ಚಾಳಿ ಬಿಟ್ಟಿಲ್ಲ ಎಂದರು.

ಬುಧವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಬಿಡದಿ ಭಾಗದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ದ ಪೋಸ್ಟರ್ ಅಂಟಿಸಿರುವ ಮಾಹಿತಿ ನನಗೂ ಬಂದಿದೆ. ರಾಜ್ಯದ ಸಿಎಂ ಆದ ಮೇಲೆಯೂ ಬ್ಲೂ ಫಿಲ್ಮ್ ‌ಮಾಡಿಸುವುದು, ಪೋಸ್ಟರ್ ಅಂಟಿಸುವುದು ಬಿಡುತ್ತಾರೆ ಅಂದುಕೊಂಡಿದ್ದೆ. ಆ ಚಾಳಿ ಡಿ.ಕೆ.ಶಿವಕುಮಾರ್’ಗೆ ಇನ್ನೂ ಹೋಗಿಲ್ಲ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ಮನುಷ್ಯ ಅಲ್ಲ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತದೆ ಎಂದು ಅವರು ಕಿಡಿಕಾರಿದರು.

ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ. ಅದನ್ನೇ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಪೋಸ್ಟರ್ ಅಂಟಿಸಿ ‌ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪತ್ನಿಯ ಚಿತ್ರವನ್ನು ಪೋಸ್ಟರ್ ನಲ್ಲಿ ಹಾಕಿದ್ದಾರೆ. ಹಾಗೆ ನೋಡಿದರೆ ಈ ವ್ಯಕ್ತಿಯ ಬಗ್ಗೆ ನಾವು ಎಷ್ಟು ಪೋಸ್ಟರ್ ಗಳನ್ನು ಅಂಟಿಸಬೇಕು ಎಂದು ಅವರು ಪ್ರಶ್ನಿಸಿದರು.

100 ಎಕರೆ ಅಂತ ಪೋಸ್ಟರ್ ನಲ್ಲಿ ಬರೆದು ನನ್ನ ಮತ್ತು ನನ್ನ ಪುತ್ರ ನಿಖಿಲ್ ಫೋಟೋಗಳನ್ನು ಹಾಕಿದ್ದಾರೆ. ನನ್ನದೂ ಅಂತ ಭೂಮಿ ಅಂತ ಇರುವುದೇ 46 ಎಕರೆ. 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿ ಮಾಡಿರುವ ಜಮೀನು ಅದು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇಲ್ಲ. ನೂರು ಎಕರೆ ಎಲ್ಲಿದೆ ಎಂದು ಅವರು ತೋರಿಸಲಿ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಭೂಮಿ ಖರೀದಿಸಿದ್ದಾರೆ. ಅದಕ್ಕೆ ಇನ್ನೂ ಯಾವನೋ ಒಬ್ಬನ ಫೋಟೋ ಹಾಕಿ ಅಂಟಿಸಿದ್ದಾರೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ವ್ಯಕ್ತಿ:

ನಿಮಗೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಗೊತ್ತಿರಬಹುದು. ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲೂಟಿ ಹೊಡೆದ ಕೆಟ್ಟ ಚರಿತ್ರೆ ಈ ವ್ಯಕ್ತಿಯದು. ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಈ ವ್ಯಕ್ತಿ ಇವತ್ತು ತನ್ನ ಚೀಲಾಗಳಿಂದ ಪೋಸ್ಟರ್ ಹಾಕಿಸಿದ್ದಾರೆ. ಜನಕ್ಕೆ ಗೊತ್ತಿದೆ, ನಾನು ಏನು? ಈ ವ್ಯಕ್ತಿಯ ಯೋಗ್ಯತೆ ಏನು ಎಂದು. ಮುಖ್ಯಮಂತ್ರಿ ಆಗಿರುವ ವ್ಯಕ್ತಿಗೆ ಒಂದು ಸ್ಟ್ಯಾಂಡರ್ಡ್ ಬೇಡವ? ಸ್ಟ್ಯಾಂಡರ್ಡ್ ಇಲ್ಲದ ವ್ಯಕ್ತಿಯ ನಡವಳಿಕೆಯಿಂದಾಗಿ ರಾಜ್ಯ ಯಾವ ದಿಕ್ಕಿಗೆ ಹೋಗುತ್ತದೆ ಅನ್ನುವುದನ್ನು ರಾಜ್ಯದ ಜನತೆಯೇ ಆಲೋಚನೆ ಮಾಡಬೇಕು ಎಂದು ಸಚಿವರು ಹೇಳಿದರು.

ಇದು ಡಿಕೆಶಿ ವಿಕೃತಿ ಎಂದು ಸಚಿವರ ಕಿಡಿ:

ಆರಂಭದಿಂದಲೂ ಇವರ ಹಿನ್ನೆಲೆಯೇ ಇದೇ ಆಗಿದೆ. ಈ ಚಾಳಿಯಲ್ಲಿ ಬಂದ ವ್ಯಕ್ತಿ‌ ಸಿಎಂ ಆದ ಮೇಲೂ ಸಿಎಂ ಕುರ್ಚಿಗೆ ಗೌರವ ಕೊಡೋದು ಬೇಡವ? ಪೋಸ್ಟರ್ ಹಾಕಿಕೊಂಡು ಅಪಪ್ರಚಾರ ಮಾಡ್ತಾ ಇದ್ದಾರೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ ಅವರ ವಿರುದ್ಧವೂ ಪೋಸ್ಟರ್ ಹಾಕಿಸಿದ್ದಾರೆ. ಆಯಿತು, ನಾವು ತಪ್ಪು ಮಾಡಿದ್ದರೆ ಅಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳಲು ಹೇಳಿ. ಸುಮ್ಮನೆ ಯಾಕೆ ಪೋಸ್ಟರ್ ಹಾಕಿದ್ದೀರಾ? ಇಲ್ಲಿವರೆಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳದ್ದು ನಡೆದು ಹೋಯಿತು. ನನ್ನನ್ನು ಹನಿಟ್ರ್ಯಾಪ್ ಮಾಡಿಸಲು ಸಂಚು ರೂಪಿಸಿದ್ದರು ಎಂದು ಸಚಿವರೊಬ್ಬರೇ ಆರೋಪಿಸಿದ್ದರು. ವಿಧಾನಸಭೆ ಕಲಾಪದಲ್ಲಿ ನಡೆದಿದ್ದನ್ನು ಇಡೀ ರಾಜ್ಯವೇ ನೋಡಿತು. ಕೊನೆಗೆ ಅವರ ಬಾಯಿ ಮುಚ್ಚಿಸಿದರು. ಸತ್ಯ ಹೇಳುತ್ತೇನೆ ಎಂದ ಅವರು ಕೊನೆಗೆ ಬಾಯಿ ತೆಗೆಯಲಿಲ್ಲ. ಹಾಳಾಗಿ ಹೋಗಲಿ, ಮುಖ್ಯಮಂತ್ರಿ ಆಗಿದ್ದಾರೆ, ಮುಂದೆ ಎಲ್ಲವೂ ನಿಲ್ಲುತ್ತದೆ ಎಂದುಕೊಂಡಿದ್ದೆ. ಇವರ ಚಾಳಿ ಬಿಡುವ ಹಾಗೆ ಕಾಣುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ನನ್ನ ಬದುಕು ತೆರೆದ ಪುಸ್ತಕ, ಹೆದರುವ ಪ್ರಶ್ನೆಯೇ ಇಲ್ಲ:

ನನ್ನ ಬದುಕು ತೆರದ ಪುಸ್ತಕ. ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆ ಇಲ್ಲ. ಈ ಪೋಸ್ಟರ್ ಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಮುಂದುವರಿಯುತ್ತದೆ. ಬಿಡದಿ ಟೌನ್ ಶಿಪ್ ನನ್ನ ಕಾಲದಲ್ಲಿ ಮಾಡಲು ಹೊರಟಿದ್ದು ನಿಜ. ಜನ ವಿರೋಧ ಮಾಡಿದರು. ಅವರಿಗೇ ಬೇಡದ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. ನಾನು ಮಾಡಲೇಬೇಕು ಅಂತಿದ್ದರೆ ಎರಡನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದ್ದೆ. ಅಂತಹ ಕೆಲಸ ನಾನು ಮಾಡಲಿಲ್ಲ. ನನ್ನ ಹೆಸರು ಹೇಳಿಕೊಂಡು ಭೂಮಿ ಲಪಟಾಯಿಸಲು ಹೊರಟಿದ್ದಾರೆ. ಉದ್ದೇಶ ಒಳ್ಳೆಯದು ಇದ್ದರೆ ಬೆಂಬಲ ‌ಕೊಡೋಣ. ಇವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಎಷ್ಟು ದುಡ್ಡು ಹೊಡೆಯಬಹುದು ಎಂದು ನೋಡುತ್ತಾರೆ. ಇಂತಹ ವ್ಯಕ್ತಿ ಬಗ್ಗೆ ನಾನು ಎಷ್ಟು ಸಾರಿ ಮಾತಾಡಲಿ ಎಂದು ಡಿಕೆಶಿ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others