ಹಾವೇರಿ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಶೀಘ್ರವೇ ಸಾಕಾರ: ಸಂಸದ ಬಸವರಾಜ ಬೊಮ್ಮಾಯಿ

​ಹಾವೇರಿ: ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ನಬಾರ್ಡ್ AIF ಸಾಲದ ಯೋಜನೆ ಹಾಗೂ ಸಂಘದ ಸ್ವಂತ ಭಂಡವಾಳದಲ್ಲಿಕೋಟಿಹಾಳ, ನಿಟಪಳ್ಳಿ ಹಾಗೂ ನಂದೀಹಳ್ಳಿ ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣ ಗೊಂಡಿರುವ ವಿವಿಧ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಸುದೀರ್ಘ ದಿನಗಳ ಕನಸು ನನಸಾಗುವ ಹಂತಕ್ಕೆ ತಲುಪಿದೆ. ಒಂದು ಜಿಲ್ಲೆಗೆ ಒಂದೇ ಡಿಸಿಸಿ ಬ್ಯಾಂಕ್‌ ಇರಬೇಕೆಂಬ ಕೇಂದ್ರ ಸರ್ಕಾರದ ಸ್ಪಷ್ಟ ಆದೇಶದ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯ ಹಾದಿ ಸುಗಮವಾಗಿದೆ ಎಂದು ಹೇಳಿದರು.

​ನಬಾರ್ಡ್ ಮತ್ತು ರಿಸರ್ವ್ ಬ್ಯಾಂಕ್ ಪ್ರಕ್ರಿಯೆ: ಜಿಲ್ಲಾ ಮಟ್ಟದಿಂದ ಸಲ್ಲಿಕೆಯಾದ ಆಡಿಟ್ ಮತ್ತು ಲೆಕ್ಕಪತ್ರ ವರದಿಗಳನ್ನು ಆಧರಿಸಿ ಬೆಂಗಳೂರಿನ ನಬಾರ್ಡ್ (NABARD) ಕಚೇರಿಯಿಂದ ಬಂದಿದ್ದ ಪ್ರಶ್ನಾವಳಿಗಳಿಗೆ ಉತ್ತರ ನೀಡಲಾಗುತ್ತಿದೆ. ಮುಂಬೈನ ನಬಾರ್ಡ್ ಮುಖ್ಯ ಕಚೇರಿಯಿಂದ ಒಪ್ಪಿಗೆ ದೊರೆತ ತಕ್ಷಣ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೂಲಕ ಹಾವೇರಿ ಡಿಸಿಸಿ ಬ್ಯಾಂಕ್‌ಗೆ ಅಧಿಕೃತ ಲೈಸೆನ್ಸ್ ಸಿಗಲಿದೆ. ಮುಂದಿನ ವರ್ಷದ ವೇಳೆಗೆ ಬ್ಯಾಂಕ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

​ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಇಲಾಖೆ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲೇ ಪ್ರಥಮ ಬಾರಿಗೆ ಕೃಷಿ ಇಲಾಖೆಯಿಂದ ಬೇರ್ಪಡಿಸಿ ಸ್ವತಂತ್ರ ‘ಸಹಕಾರ ಇಲಾಖೆ’ಯನ್ನು ಸ್ಥಾಪಿಸಿದರು. ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅಮಿತ್ ಶಾ ಅವರನ್ನು ಕೇಂದ್ರ ಸಹಕಾರ ಸಚಿವರನ್ನಾಗಿ ಮಾಡಲಾಗಿದೆ. ಅವರು ಕೇಂದ್ರ ಗೃಹ ಸಚಿವರಾಗಿದ್ದರೂ ಸಹ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನವನ್ನು ಇಂದಿಗೂ ಬಿಟ್ಟುಕೊಡದೆ ಗೌರವಿಸುತ್ತಿದ್ದಾರೆ ಎಂದು ಬೊಮ್ಮಾಯಿ ಬಣ್ಣಿಸಿದರು.

​ರೈತರು ಹಾಗೂ ಸೊಸೈಟಿಗಳಿಗೆ ಲಾಭ: ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯಾದರೆ, ನಬಾರ್ಡ್‌ನಿಂದ ಬರುವ ಅನುದಾನ ಹಾಗೂ ಬ್ಯಾಂಕ್‌ನ ಡೆಪಾಸಿಟ್‌ಗಳ ಸೌಲಭ್ಯ ನೇರವಾಗಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಲುಪಲಿದೆ. ಪ್ರಸ್ತುತ ಸೊಸೈಟಿಗಳ ಮೂಲಕ ರೈತರಿಗೆ ಸಿಗುತ್ತಿರುವ ಸಾಲದ ಪ್ರಮಾಣಕ್ಕಿಂತ (3 ರಿಂದ 5 ಲಕ್ಷ ರೂ.) ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಿನ ಸಾಲ ಮತ್ತು ಸೌಲಭ್ಯಗಳು ನೇರವಾಗಿ ರೈತರ ಕೈಸೇರಲಿವೆ ಎಂದು ಬೊಮ್ಮಾಯಿ ಹೇಳಿದರು.

​ಕಡಿಮೆ ಬಡ್ಡಿದರದ ಸಾಲ ಸೌಲಭ್ಯ: ರೈತರಿಗೆ ಕೃಷಿ ಉತ್ಪಾದನೆಗೆ 3 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ದೊರೆಯುತ್ತಿದ್ದು, ಮುಂದಿನ ಹಂತದಲ್ಲಿ 3% ರಿಂದ 5% ಬಡ್ಡಿದರದಲ್ಲಿ ಭೂ ಅಭಿವೃದ್ಧಿ ಹಾಗೂ ಟ್ರ್ಯಾಕ್ಟರ್‌ ಖರೀದಿಗೆ ಸಾಲ ನೀಡಲಾಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಭೂ ಅಭಿವೃದ್ಧಿಗೆ 15 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲೂ 10 ಲಕ್ಷ ರೂ. ಇರುವ ಮಿತಿಯನ್ನು 15 ಲಕ್ಷ ರೂ.ಗೆ ಹೆಚ್ಚಿಸುವಂತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

​ಜಿಲ್ಲೆಯ ಸ್ವಂತ ಆಡಳಿತ ವ್ಯವಸ್ಥೆ: ಹಾವೇರಿ ಜಿಲ್ಲೆಯಾದ ಮೇಲೆ ಎಂಜಿನಿಯರಿಂಗ್, ಮೆಡಿಕಲ್ ಮತ್ತು ಲಾ ಕಾಲೇಜುಗಳನ್ನು ತರಲಾಗಿದೆ. ಅದೇ ರೀತಿ ಸಹಕಾರ ಕ್ಷೇತ್ರದಲ್ಲೂ ‘ನಮ್ಮದೇ ಜಿಲ್ಲೆ, ನಮ್ಮದೇ ಆಡಳಿತ, ನಮ್ಮದೇ ಸೊಸೈಟಿ, ನಮ್ಮದೇ ಸಾಲ ಮತ್ತು ವಸೂಲಾತಿ’ ಎಂಬ ತತ್ವದಡಿ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಯಾಗಬೇಕು. ಪ್ರತಿಯೊಬ್ಬ ಗ್ರಾಮೀಣ ರೈತ ಹಾಗೂ ಶ್ರಮಿಕ ಮತ್ತೊಬ್ಬರ ಮುಂದೆ ಸಾಲಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ಬರಬಾರದು. ಗ್ರಾಮದ ಸೊಸೈಟಿಗಳೇ ರೈತರ ಎಲ್ಲ ಅಗತ್ಯಗಳಿಗೆ ಭದ್ರ ಬುನಾದಿಯಾಗಬೇಕು ಎಂದು ಆಶಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others