ಬೆಳಗಾವಿ: ಸಪ್ತಪದಿ ತುಳಿದು ಒಂಬತ್ತು ವರ್ಷಗಳ ಕಾಲ ಜೊತೆಯಾಗಿದ್ದಾಕೆಯನ್ನು, ಕೇವಲ ನಾಲ್ಕು ವರ್ಷದ ಅಕ್ರಮ ಮೋಹಕ್ಕಾಗಿ ಹಸನ್ಮುಖಿಯಾಗಿ ಕಟುಕನೊಬ್ಬ ಬಲಿಪಡೆದಿದ್ದಾನೆ. ಪ್ರೇಯಸಿ ಜೊತೆಗಿನ ಸುಖದ ಆಸೆಗೆ ಕಣ್ಣು ಮುಚ್ಚಿದ ಆತ, ದೇವಸ್ಥಾನದ ಪವಿತ್ರ ವಾತಾವರಣದಲ್ಲೇ ಹೆಂಡತಿಯ ಕೊಲೆಗೆ ರೇಖಾಚಿತ್ರ ಬರೆದಿದ್ದ ಕರಾಳ ಕಥನವಿದು!
ಮುಳ್ಳಾದ ಮುಗ್ಧ ಪತ್ನಿ
ಧಾರವಾಡ ತಾಲೂಕಿನ ಕಲ್ಲೂರು ಮೂಲದ ಸಕ್ಕುಬಾಯಿ, ಒಂಬತ್ತು ವರ್ಷಗಳ ಹಿಂದೆ ಸಂತೋಷ್ ಪಟಾಯತ್ ಕೈಹಿಡಿದು ಸಂಸಾರ ಹೂಡಿದ್ದಳು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸಂತೋಷ್‌ನ ಬಾಳಿಗೆ ವಿಧವೆ ಮಹಿಳೆಯೊಬ್ಬಳ ಪ್ರವೇಶವಾಯಿತು. ಆಕೆಯ ಅತಿಯಾದ ವ್ಯಾಮೋಹಕ್ಕೆ ಬಿದ್ದ ಸಂತೋಷ್‌ಗೆ ತನಗಾಗಿ ಕಾಯುತ್ತಿದ್ದ ಹೆಂಡತಿ ಶತ್ರುವಿನಂತೆ ಕಾಣತೊಡಗಿದಳು. ಪ್ರೇಯಸಿಯೊಂದಿಗೆ ಹೊಸ ಜೀವನ ಆರಂಭಿಸಲು ಹೆಂಡತಿಯನ್ನು ಜಗತ್ತಿನಿಂದಲೇ ಇಲ್ಲದಂತೆ ಮಾಡಲು ಆತ ಮಾಸ್ಟರ್ ಪ್ಲಾನ್ ರೂಪಿಸಿದ.
ತಂಪುಪಾನೀಯದಲ್ಲಿ ಅಡಗಿದ್ದ ವಿಷದ ವಿಷಾದ!
ಅಧಿಕ ಮಾಸದ ಪವಿತ್ರ ದಿನದಂದು ಪತ್ನಿಯನ್ನ ಕರೆದುಕೊಂಡು ಬೈಲಹೊಂಗಲದ ಮರುಕುಂಬಿ ಗ್ರಾಮದ ಚಾಮುಂಡೇಶ್ವರ ದೇವಸ್ಥಾನಕ್ಕೆ ಆತ ಭೇಟಿ ನೀಡಿದ್ದ. ಪತಿಯ ಮನದೊಳಗಿದ್ದ ಹಂತಕನ ಮುಖವಾಡದ ಅರಿವಿಲ್ಲದ ಸಕ್ಕುಬಾಯಿ, ಮನದಲ್ಲೇನೋ ಆಸೆ ಹೊತ್ತು ದೇವಿಗೆ ನಮಸ್ಕರಿಸಿದ್ದಳು. ಅಲ್ಲಿಂದ ಮರಳುವಾಗ ಸಂತೋಷ್ ತಂಪುಪಾನೀಯ ತಂದುಕೊಟ್ಟಿದ್ದ. ಅದರಲ್ಲಿ ಆತ ಈಗಾಗಲೇ ಇಲಿ ಪಾಷಾಣ ಹಾಗೂ ಬಳೆಯ ಗಾಜಿನ ಚೂರುಗಳನ್ನು ನುಣ್ಣಗೆ ಅರೆದು ಬೆರೆಸಿದ್ದ.
“ದೇವಿಯ ಪ್ರಸಾದವಿದು, ಕುಡಿ…” ಎಂದು ಪತಿ ಪ್ರೀತಿಯಿಂದ ಕೈಗಿಟ್ಟಾಗ, ಆ ಮುಗ್ಧೆ ಸಂಶಯವಿಲ್ಲದೆ ಅದನ್ನು ಕುಡಿದುಬಿಟ್ಟಳು.
ಕತ್ತು ಹಿಸುಕಿ ಹತ್ಯೆ: ಅಪಘಾತದ ನಾಟಕ!
ವಿಷದ ತೀವ್ರತೆಗೆ ಸಕ್ಕುಬಾಯಿ ನಡುರಸ್ತೆಯಲ್ಲೇ ತಲೆತಿರುಗಿ ಬಿದ್ದಿದ್ದಾಳೆ. ಆಕೆ ಹೇಗಾದರೂ ಸಾಯಲಿ ಎಂದು ಕಾಯುತ್ತಿದ್ದ ಆತ, ತಕ್ಷಣವೇ ಕತ್ತು ಹಿಸುಕಿ ಆಕೆಯ ಉಸಿರು ನಿಲ್ಲಿಸಿದ್ದಾನೆ.
ಕೊಲೆಯನ್ನ ಯಾರಿಗೂ ಸಂಶಯ ಬಾರದಂತೆ ಮುಚ್ಚಿಹಾಕಲು, ಇದೊಂದು ‘ರಸ್ತೆ ಅಪಘಾತ’ ಎಂಬಂತೆ ಬಿಂಬಿಸಲು ಆತ ಮುಂದಾದ. ತಾನು ತಂದಿದ್ದ ದ್ವಿಚಕ್ರ ವಾಹನವನ್ನು ಮೃತದೇಹದ ಮೇಲೆ ಎತ್ತಿ ಹಾಕಿ, ಸುಮಾರು 2-3 ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಕುಳಿತು ಯಾರೂ ಇಲ್ಲದ ವೇಳೆ ಹೈಡ್ರಾಮಾ ಮಾಡಿದ್ದಾನೆ. ಜನಸಂಚಾರವಿಲ್ಲದ್ದನ್ನು ಖಚಿತಪಡಿಸಿಕೊಂಡು ಕೊನೆಗೆ ತಾನೇ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಪೊಲೀಸರಿಗೆ ಕಟ್ಟುಕಥೆ ಹೇಳಿದ್ದಾನೆ.
ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಅಸಲಿ ಸತ್ಯ ಬಯಲು!
ಘಟನಾ ಸ್ಥಳಕ್ಕೆ ಧಾವಿಸಿದ ಗೋಕಾಕ ಪೊಲೀಸರಿಗೆ ತನಿಖೆಯ ಆರಂಭದಲ್ಲೇ ಅನುಮಾನದ ವಾಸನೆ ಬಡಿದಿದೆ. ಅಪಘಾತ ನಡೆದ ಶೈಲಿಗೂ, ಹೆಂಡತಿ ಕಳೆದುಕೊಂಡ ಗಂಡನ ಮುಖದ ಭಾವನೆಗೂ ತಾಳೆಯಾಗುತ್ತಿರಲಿಲ್ಲ. ತಕ್ಷಣವೇ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಪ್ರಾಥಮಿಕ ವೈದ್ಯಕೀಯ ವರದಿ ಕೈಸೇರುತ್ತಿದ್ದಂತೆ ಪೊಲೀಸರ ಶಂಕೆ ನಿಜವಾಗಿತ್ತು. ಅದು ಅಪಘಾತದಿಂದ ಸಂಭವಿಸಿದ ಸಾವಲ್ಲ, ಬದಲಿಗೆ ವಿಷ ಉಣಿಸಿ, ಉಸಿರುಗಟ್ಟಿಸಿ ಮಾಡಿದ ವ್ಯವಸ್ಥಿತ ಕೊಲೆ ಎಂಬುದು ಬಹಿರಂಗವಾಯಿತು.
ಕಂಬಿ ಎಣಿಸುತ್ತಿರುವ ಕಿರಾತಕ
ವಿಷಯ ತಿಳಿಯುತ್ತಿದ್ದಂತೆ ಸಂತೋಷ್‌ನನ್ನು ವಶಕ್ಕೆ ಪಡೆದ ಪೊಲೀಸರು ತಮ್ಮದೇ ಶೈಲಿಯಲ್ಲಿ ಬಿಸಿ ಮುಟ್ಟಿಸಿದಾಗ, ಆತ ತನ್ನ ಪಾಪದ ರಹಸ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರೇಯಸಿ ಜೊತೆ ಸಂಸಾರ ನಡೆಸಲು ಹೆಂಡತಿಯನ್ನೇ ಕೊಂದಿದ್ದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಈ ಕಿರಾತಕ ಹಿಂಡಲಗಾ ಕೇಂದ್ರ ಕಾರಾಗೃಹದ ಕಂಬಿ ಎಣಿಸುತ್ತಿದ್ದಾನೆ.
ಪತ್ನಿಯ ಹತ್ಯೆಯ ಹಿಂದೆ ಆತನ ವಿಧವೆ ಪ್ರೇಯಸಿಯ ಪ್ರಚೋದನೆ ಅಥವಾ ಪಿತೂರಿ ಏನಾದರೂ ಇದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ತನಗಾಗಿ ಬಾಳಿದ ಹೆಂಡತಿಯನ್ನೇ ಕೊಂದ ಪಾಪಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಎಲ್ಲರ ಆಕ್ರೋಶವಾಗಿದೆ.





