ಅಬಕಾರಿ ಹೆಚ್ಚುವರಿ ಆಯುಕ್ತನ ಮನೆ ಮೇಲೆ ಇಡಿ ದಾಳಿ : ಹಾಗಾದ್ರೆ ಯಾರು ಗೊತ್ತಾ ಆ ಅಧಿಕಾರಿ? ಇಲ್ಲಿದೆ ನೋಡಿ ಮಾಹಿತಿ

ಬೆಳಗಾವಿ : ಸರ್ಕಾರಿ ಕೆಲಸ ಬೇಕು ಅಂತ ಸಾಕಷ್ಟು ಜನ ಕಾಯುತ್ತಾ ಇರುತ್ತಾರೆ ಇದಕ್ಕೆ ಕಾರಣ ಸರ್ಕಾರಿ ಕೆಲಸ ಮಾಡಿದ್ರೆ ಒಳ್ಳೆಯ ಸಂಬಳ, ಯಾವುದೇ ಕಿರಿ ಕಿರಿ ಇರುವುದಿಲ್ಲ ಜೀವನ ಪೂರ್ತಿ ನೆಮ್ಮದಿಯಾಗಿ ಇರಬಹುದು ಎನ್ನುವ ಬಯಕೆ. ಹೀಗಿರುವಾಗ ಅಧಿಕಾರಿಗಳು ಅಡ್ಡ ದಾರಿಯುತ್ತ ಸಾಗುವುದು ಯಾಕೆ? ಕಾರಣವೇ ಅತಿಯಾಸೆ ಅಲ್ಲವೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ ಇಡಿ ಅಧಿಕಾರಿಗಳು ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ ಮಾಡಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭಾರಿ ದಾಳಿ ನಡೆಸಿದ್ದಾರೆ.

ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ ಅವರಿಗೆ ಸೇರಿದ ಒಟ್ಟು 6 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಕೈಗೊಂಡಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ತನಿಖೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ 10 ಕ್ಕೂ ಹೆಚ್ಚು ಅರೆಸೇನಾ ಪಡೆಯ ಯೋಧರ ಕಾವಲಿನಲ್ಲಿ ಈ ದಾಳಿ ನಡೆಸಲಾಗಿದೆ.

ವೈ. ಮಂಜುನಾಥ್ ಅವರು ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಬೆಳಗಾವಿ ವಲಯದ ಪ್ರಮುಖ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳು, ಆಸ್ತಿ ಪಾಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇಂದು ಬೆಳಿಗ್ಗೆಯೇ ಕಾರ್ಯಪ್ರವೃತ್ತರಾದ ಇಡಿ ಅಧಿಕಾರಿಗಳು, ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ಅವರ ನಿವಾಸಕ್ಕೆ ಲಗ್ಗೆ ಇಟ್ಟಿದ್ದಾರೆ. ಗೋವಾ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಜಂಟಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರನಾಗಿರುವ ಮಂಜುನಾಥ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸೇರಿದಂತೆ ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು ಎನ್ನಲಾಗಿದೆ.

Share it :

Leave a Reply

Your email address will not be published. Required fields are marked *