ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿ ಸಿಇಟಿ ಕೋರ್ಸ್ ಗಳ ಪ್ರವೇಶ ಕುರಿತ ಸೀಟು ಹಂಚಿಕೆಯ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
ಸಿಇಟಿ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಗೆ ಆ.25ರಿಂದ 28ರವರೆಗೆ ಸಮಯ ನಿಗದಿ ಮಾಡಿದ್ದು ಈ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಸೇರಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ. ಎಸ್ ಸಿ. (ನರ್ಸಿಂಗ್), ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಇಚ್ಛೆ ಇದ್ದಲ್ಲಿ ಚಾಯ್ಸ್- 1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲ ಎನ್ನುವವರು ಚಾಯ್ಸ್- 4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಬಹುದು ಎಂದು ಅವರು ವಿವರಿಸಿದ್ದಾರೆ.
ಚಾಯ್ಸ್-1 ಅಯ್ಕೆ ಮಾಡಿಕೊಂಡು ಸಿಇಟಿ ಕೋರ್ಸ್ ಗೆ ಪ್ರವೇಶ ಪಡೆದವರು ಇನ್ನೂ ಉತ್ತಮ ಸೀಟಿನ ನಿರೀಕ್ಷೆಯಲ್ಲಿದ್ದರೆ, 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಲಾಗಿನ್ ಆಗುವುದರ ಮೂಲಕ ಭಾಗವಹಿಸಬಹುದು. ಒಂದು ವೇಳೆ ಚಾಯ್ಸ್-1 ಆಯ್ಕೆ ಮಾಡದೆ, 3ನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ₹5,000 ದಂಡ ಪಾವತಿಸಿ ರದ್ದುಪಡಿಸಿಕೊಳ್ಳಬೇಕು. ಅದರ ನಂತರವೇ 3ನೇ ಸುತ್ತಿನಲ್ಲಿ ಲಾಗಿನ್ ಆಗಿ, ಹೊಸದಾಗಿ ನೋಂದಣಿ ಶುಲ್ಕ ಪಾವತಿಸಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.





