ರಾಜ್ಯಾಧ್ಯಂತ ರಾತ್ರಿ 10 ಗಂಟೆ ನಂತ್ರ ಪಟಾಕಿ ನಿಷೇಧ: ಸರ್ಕಾರದ ಖಡಕ್ ಆದೇಶ

ಬೆಂಗಳೂರು: ರಾಜ್ಯದಲ್ಲಿ ‘ಪರಿಸರ ಸ್ನೇಹಿ ದೀಪಾವಳಿ ಹಬ್ಬ-2026’ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಹಬ್ಬದ ನೆಪದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗುವುದನ್ನು ತಡೆಗಟ್ಟಲು ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ.

ಪಟಾಕಿ ಮಾಲಿನ್ಯ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ 

ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದ್ದರೂ, ಅವುಗಳ ತಯಾರಿಕೆಯಲ್ಲಿ ಬಳಸುವ ಸ್ಫೋಟಕ ರಾಸಾಯನಿಕಗಳು ವಾತಾವರಣಕ್ಕೆ ಬಿಡುಗಡೆಯಾಗಿ ತೀವ್ರ ವಾಯುಮಾಲಿನ್ಯವನ್ನು ಸೃಷ್ಟಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಸಂಗ್ರಹಿಸಲಾದ ವಾಯು ಮಾದರಿಗಳ ವಿಶ್ಲೇಷಣಾ ವರದಿಗಳು ಹಬ್ಬದ ಅವಧಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದನ್ನು ದೃಢಪಡಿಸಿವೆ. ಜೊತೆಗೆ ಪಟಾಕಿಗಳನ್ನು ಅಸುರಕ್ಷಿತ ಸ್ಥಳಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಸ್ಫೋಟಗಳು ಸಂಭವಿಸುವುದು, ಪ್ರಾಣಹಾನಿ ಹಾಗೂ ಜನರ ಆರೋಗ್ಯಕ್ಕೆ ತೀವ್ರ ಹಾನಿಯುಂಟಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸರ್ಕಾರದ ಗಮನಕ್ಕೆ ಬಂದಿದೆ. 

ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯವು ಹೊರಡಿಸಿರುವ ತೀರ್ಪಿನ ಅನ್ವಯ, ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನ್ಯಾಯಾಲಯ ಅನುಮತಿಸಿರುವ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಾಮಾನ್ಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿರ್ಬಂಧಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ‘ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರ’ಕ್ಕೆ ಶಬ್ದಮಾಲಿನ್ಯ ನಿಯಂತ್ರಣದ ಸಂಪೂರ್ಣ ಉಸ್ತುವಾರಿಯನ್ನು ವಹಿಸಲಾಗಿದೆ.

ರಾಜ್ಯಾದ್ಯಂತ ನಿಷೇಧಿತ ಪಟಾಕಿಗಳ ವಿರುದ್ಧ ಕಠಿಣ ನಿಷೇಧ

 ಕರ್ನಾಟಕದಾದ್ಯಂತ ನಿಷೇಧಿತ ಪಟಾಕಿಗಳ ಉತ್ಪಾದನೆ, ದಾಸ್ತಾನು, ಸಾಗಾಣಿಕೆ, ಹಂಚಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ನಿಷೇಧಿತ ಪಟಾಕಿಗಳು ಅಥವಾ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನಿನನ್ವಯ ಕಠಿಣ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು. ಪಟಾಕಿ ವ್ಯಾಪಾರಿಗಳು ಕಡ್ಡಾಯವಾಗಿ ನಿಯಮಾನುಸಾರ ಪರವಾನಗಿ ಪಡೆದು, ಷರತ್ತುಗಳನ್ನು ಪಾಲಿಸಬೇಕು. ಹಸಿರು ಪಟಾಕಿಗಳ ಹೆಸರಿನಲ್ಲಿ ನಕಲಿ ಅಥವಾ ಅನುಮೋದನೆ ಪಡೆಯದ ಪಟಾಕಿಗಳು ಮಾರಾಟವಾಗದಂತೆ ತಡೆಯಲು ಅಧಿಕಾರಿಗಳು ನಿರಂತರವಾಗಿ ಮಳಿಗೆಗಳಿಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಲಿದ್ದಾರೆ.

ಹಸಿರು ಪಟಾಕಿಗಳ ಖರೀದಿ ಮತ್ತು ಬಳಕೆ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ 

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಅತ್ಯಂತ ಕಡಿಮೆ ಪ್ರಮಾಣದ ರಾಸಾಯನಿಕ, ಹೊಗೆ ಹಾಗೂ ಶಬ್ದ ಮಾಲಿನ್ಯವನ್ನು ಹೊರಸೂಸುವಂತೆ ವಿನ್ಯಾಸಗೊಂಡಿವೆ. ಸಾರ್ವಜನಿಕರು ಅಧಿಕೃತ ಹಾಗೂ ಅನುಮೋದಿತ ಮಾರಾಟಗಾರರಿಂದ ಮಾತ್ರ ಇಂತಹ ಪರಿಸರ ಸ್ನೇಹಿ ಪಟಾಕಿಗಳನ್ನು ಖರೀದಿಸಬೇಕು. ಖರೀದಿಸುವ ಮುನ್ನ ಪಟಾಕಿಗಳ ಪ್ಯಾಕೆಟ್‌ಗಳ ಮೇಲಿರುವ ಅಧಿಕೃತ ಹಸಿರು ಪಟಾಕಿ ಮುದ್ರೆ, ಕ್ಯೂಆರ್ ಕೋಡ್ (QR Code) ಹಾಗೂ ಸಂಬಂಧಪಟ್ಟ ಗುಣಮಟ್ಟ ಪ್ರಮಾಣೀಕರಣವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪಟಾಕಿಗಳಿಂದ ಉಂಟಾಗುವ ಹೊಗೆ ಮತ್ತು ಶಬ್ದವು ಮಕ್ಕಳು, ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಹಾಗೂ ಮೂಕ ಪ್ರಾಣಿಗಳ ಮೇಲೆ ತೀವ್ರ ದುಷ್ಪರಿಣಾಮ ಬೀರುವುದರಿಂದ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅತ್ಯಗತ್ಯವಾಗಿದೆ.

ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಕರ್ತವ್ಯಗಳು 

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಬಂಧಿತ ಇಲಾಖೆಗಳ ಸಮನ್ವಯ ಸಭೆಗಳನ್ನು ನಡೆಸಿ ವಾಯು ಮತ್ತು ಶಬ್ದ ಮಾಲಿನ್ಯ ತಡೆಗೆ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಸಾರ್ವಜನಿಕರು ನಿಗದಿತ 2 ಗಂಟೆಗಳ ಕಾಲಾವಧಿಯಲ್ಲಿ ಮಾತ್ರ ಪಟಾಕಿ ಸಿಡಿಸುವಂತೆ ನಿಗಾ ವಹಿಸಬೇಕು. ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳು ಹಾಗೂ ಸೂಕ್ಷ್ಮ ವಲಯಗಳ (Silence Zones) ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಹಬ್ಬದ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಬೀಳುವ ಪಟಾಕಿ ತ್ಯಾಜ್ಯವನ್ನು ಸ್ಥಳೀಯ ನಗರ ಸಂಸ್ಥೆಗಳು ತಕ್ಷಣವೇ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.

ಅರಿವು ಅಭಿಯಾನ ಹಾಗೂ ಸಾರ್ವಜನಿಕರ ಸಹಭಾಗಿತ್ವ 

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಪಟಾಕಿ ರಹಿತ ಮತ್ತು ಹಸಿರು ದೀಪಾವಳಿ ಆಚರಣೆ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಎಲ್ಲಾದರೂ ನಿಷೇಧಿತ ಪಟಾಕಿಗಳ ಮಾರಾಟ, ಸಂಗ್ರಹ ಅಥವಾ ಸಮಯದ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಸ್ಥಳೀಯ ಪಾಲಿಕೆ, ಪುರಸಭೆ, ಪೊಲೀಸ್ ಠಾಣೆ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಲಾಗಿದೆ.

ಪರಿಸರ ಸ್ನೇಹಿ ಹಬ್ಬಕ್ಕೆ ಸಚಿವರ ಸಂದೇಶ 

ಈ ಕುರಿತು ಸಾರ್ವಜನಿಕರಿಗೆ ಕರೆ ನೀಡಿರುವ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಅವರು, “ಈ ಬಾರಿಯ ದೀಪಾವಳಿಯನ್ನು ನಾವೆಲ್ಲರೂ ಪರಿಸರ ಸ್ನೇಹಿಯಾಗಿ ಆಚರಿಸೋಣ. ಕೇವಲ ಅಧಿಕೃತ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ಪಟಾಕಿಗಳ ಅತಿಯಾದ ಬಳಕೆಯನ್ನು ಮಿತಿಗೊಳಿಸೋಣ. ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಹಾಗೂ ಸ್ವಚ್ಛ ಪರಿಸರವನ್ನು ಉಳಿಸಿಕೊಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *