ಮೈಸೂರು: ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಬಿಜೆಪಿ, ದೇಶದಲ್ಲಿ ಸರ್ವಾಧಿಕಾರ ಸ್ಥಾಪಿಸಲು ಹೊರಟಿದೆ. ಶೂದ್ರರು ಬಿಜೆಪಿ ಜೊತೆ ಹೋಗಬಾರದು. ಬಿಜೆಪಿ ಶೂದ್ರರ ವಿರೋಧಿ. ಸುಳ್ಳನ್ನು ಮಾರಾಟ ಮಾಡುವ ಸುಳ್ಳಿನ ಕಾರ್ಖಾನೆ ಬಿಜೆಪಿ. ಅಧಿಕಾರಕ್ಕಾಗಿ ಬಿಜೆಪಿ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಚ್ಚರ ತಪ್ಪಿದರೆ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಮುಗಿಸುತ್ತದೆ. ಒಂದು ತಿಂಗಳು ಮೈಮರೆತರೂ ನಿಮ್ಮ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ದೇಶದಲ್ಲಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗ ಇಲ್ಲದಂತಾಗಿದೆ. ಬಿಜೆಪಿ ಚನೇತೃತ್ವದಲ್ಲಿ ದುರಾಡಳಿತ ನಡೆಯುತ್ತಿದೆ. ನನ್ನ ರಾಜಕೀಯ ಜೀವನ ಮುಗಿದಿದೆ. ನಿಮ್ಮ ರಾಜಕೀಯ ಭವಿಷ್ಯ ಉತ್ತಮವಾಗಿರಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಇಲ್ಲದೆ ಇದ್ದರೆ ನಿಮ್ಮ ರಾಜಕೀಯ ಮಾರಣಹೋಮ ನಿಶ್ಚಿತ ಎಂದು ಎಚ್ಚರಿಸಿದರು.
ಆ ಮತಗಳನ್ನೇ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿರುವ ಎಸ್‌ಐಆರ್ ಅವಧಿಯಲ್ಲಿ ಕಾಂಗ್ರೆಸ್‌ನ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ದೇಶದಲ್ಲಿ ಬಿಜೆಪಿ ಕೇವಲ 36 ಶೇಕಡಾ ಮತಗಳನ್ನು ಪಡೆದಿದ್ದು, ಉಳಿದ 64 ಶೇಕಡಾ ಜನರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ ಎಂದು ತಿಳಿಸಿದರು.
ಬಿಎಲ್‌ಒಗಳ ಜೊತೆ ಸಮನ್ವಯ ಸಾಧಿಸಿ ಮನೆ ಮನೆಗೆ ಭೇಟಿ ನೀಡಬೇಕಿದ್ದು, ಪ್ರತಿ ಬೂತ್‌ಗೆ ಇಬ್ಬರು ಸ್ಥಳೀಯ ಮತದಾರರನ್ನು ಆಯ್ಕೆ ಮಾಡಿ, ಎನ್ಯೂಮರೇಷನ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಸ್ವೀಕೃತಿ ದೃಢೀಕರಣ ಪಡೆಯಬೇಕು ಎಂದು ಸೂಚಿಸಿದರು.
2014ರ ಬಳಿಕ “ಮತ ದ್ರೋಹ” ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ಗೆ ಮತ ಹಾಕುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಹೊಸ ಪ್ರಕ್ರಿಯೆಯಲ್ಲ. 1952ರಿಂದಲೇ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ. ಆದರೆ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದು ಹೇಳಿದರು.





