ರಾಮನಗರದಲ್ಲಿ SIR ವೇಳೆ ಬೃಹತ್ ಸ್ಕ್ಯಾಮ್ ವೀಡಿಯೋ ಸಹಿತ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಚುರುಕುಗೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ರಾಮನಗರದಲ್ಲಿ ಬೃಹತ್ ‘ಸ್ಕ್ಯಾಮ್’ ಅಂಟಿಕೊಂಡಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಿಡಿಯೋ ಸಮೇತವಾಗಿ ರಾಮನಗರದಲ್ಲಿ ನಡೆಯುತ್ತಿರುವ ಈ ಅಕ್ರಮವನ್ನು ಬಯಲು ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿದ ಕೇಂದ್ರ ಸಚಿವರು; ರಾಮನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಳುಮಾಡಲು ಹೊರಟಿದೆ. ಅದಕ್ಕೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವೇ ಸಾಕ್ಷಿ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇದಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿರುವ ಎಲ್ಲಾ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು ಎಂದು ಅಗ್ರಪಡಿಸಿದರು.

ಮುಖ್ಯಮಂತ್ರಿಗಳ ನೇರ ಪ್ರಭಾವ ಬಳಸಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಸೇರಿದಂತೆ ಸಾವಿರಾರು ಕಳ್ಳ ಮತದಾರರಿಗೆ ದಾಖಲೆ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಡಿಯೋ ಸಮೇತ ಬಾಂಬ್ ಸಿಡಿಸಿದ್ದಾರೆ. ಕೂಡಲೇ ಕೇಂದ್ರೀಯ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಮನವಿ ಮಾಡಿದರು.

ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಈ ವಿಡಿಯೋಗಳನ್ನು ನೋಡುತ್ತಿದ್ದರೆ ನಮ್ಮ ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ ಎಂಬುದು ಅರ್ಥವಾಗುತ್ತದೆ. ಒಂದು ಕೈಯಲ್ಲಿ ಸಂವಿಧಾನ ಹಿಡಿದು ಶೋ ಮಾಡುವ ಪಕ್ಷ ಮಾಡುತ್ತಿರುವ ಹೀನ ಕೆಲಸ ಇದಾಗಿದೆ. ಗ್ಯಾರೆಂಟಿಗಳಿಗೆ ಕತ್ತರಿಯಾಗುವುದಾಗಿ ಜನರಲ್ಲಿ ಪ್ರೀತಿ ಸೂಚಿಸಿ ಈ ದಂಧೆ ಮಾಡುತ್ತಿದೆ ಎಂದು ನೇರ ಆರೋಪ ಮಾಡಿದರು.

ನಿಯಮದಂತೆ BLOಗಳು ಮನೆ-ಮನೆಗೆ ಹೋಗಬೇಕಾದರೆ, ರಾಮನಗರದಲ್ಲಿ ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಕೂರಿಸಿ SIR ಜಾತ್ರೆ ನಡೆಸುತ್ತಿದ್ದಾರೆ. ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ನುಸುಳುಕೋರರನ್ನು ಇಲ್ಲಿ ಪೋಷಿಸಿ, ಅವರಿಗೆ ಮತದಾನದ ಹಕ್ಕು ಕೊಡಿಸುವ ವ್ಯವಸ್ಥಿತ ಸಂಚು ಇದು ಎಂದು ಅವರು ಗುಡುಗಿದರು.

ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು: 

ರಾಜ್ಯದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಮುಖ್ಯಮಂತ್ರಿಗಳ ಮನೆಯಿಂದಲೇ ಶುರುವಾಯಿತು. ಮುಖ್ಯಮಂತ್ರಿಯಾದವರು ಕಾರ್ಯದರ್ಶಿಕವಾಗಿ ಈ ಪ್ರಕ್ರಿಯೆ ನಡೆಯಬೇಕೆಂದು ಜನತೆಗೆ ಕರೆ ಕೊಡಬೇಕೆಂದು ನಿಮಗೆ ಮತವಿಲ್ಲದಿದ್ದರೆ ಯಾವ ಸೌಲಭ್ಯವು ಸಿಗುವುದಿಲ್ಲ ಎಂದು ಬ್ಲಾಕ್ಮೇಲ್ ಮಾಡಬಾರದು. ಇಂಥ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದು ಸರಿಯಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
 
ಗ್ಯಾರಂಟಿ ಕಟ್ ಆಗುತ್ತೆ ಎಂಬ ಭಯ ಹುಟ್ಟಿಸಿ, SIR ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ನಾಯಕರ ಕಟು ಮಾತುಗಳೇ ಇದಕ್ಕೆ ಸಾಕ್ಷಿ ಎಂದು ಹೆಚ್‌ಡಿಕೆ ತಿರುಗೇಟು ನೀಡಿದರು.

ಇದು ಸಂಪೂರ್ಣ ಆಡಳಿತ ವೈಫಲ್ಯ. ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಾನೂನು ಗಾಳಿಗೆ ತೂರಿದ್ದಾರೆ. ಬಾಂಗ್ಲಾ ವಲಸಿಗರಿಗೆ ದಾಖಲೆ ಸೃಷ್ಟಿಸುವುದು ದೇಶದ್ರೋಹದ ಕೆಲಸ ಎಂದು ಹೆಚ್‌ಡಿಕೆ ಕಿಡಿಕಾರಿದರು.

ಕೇಂದ್ರಕ್ಕೆ ದೂರು, HDK ಎಚ್ಚರಿಕೆ:  

ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಈ ಅಕ್ರಮವನ್ನು ಸುಮ್ಮನೇ ಬಿಡಲ್ಲ. ವಿಡಿಯೋ ಸಮೇತ ಎಲ್ಲಾ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡುತ್ತೇನೆ. ತಕ್ಷಣ ಮಧ್ಯಪ್ರವೇಶಿಸಿ SIR ಪ್ರಕ್ರಿಯೆ ಸ್ಥಗಿತಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಹೆಚ್‌ಡಿಕೆ ಆಗ್ರಹಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post