ಬೆಂಗಳೂರು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಆರತಿ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರ ಮೇಲೆ ನಡೆಸಿದ ದರ್ಪ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಗೌಡ ಅವರು ಸ್ವಯಂಪ್ರೇರಿತ ವೀಡಿಯೋ ಮಾಡಿ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಕೋಟ್ ಕೋರ್ಟ್ ಆದೇಶದ ಬೆನ್ನಲ್ಲೇ ಕ್ಷಮೆಯಾಚನೆ
ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ಗೌಡ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಶ್ರೀರಂಗಪಟ್ಟಣದ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ, ಹೈಕೋರ್ಟ್ ಮೆಟ್ಟಿಲೇರಿದ್ದ ಐಶ್ವರ್ಯ ಅವರಿಗೆ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಗೆ ಕ್ಷಮೆ ಕೇಳುವಂತೆ ನ್ಯಾಯಾಲಯ ಸೂಚಿಸಿತ್ತು. ಹೈಕೋರ್ಟ್ ನಿರ್ದೇಶನದಂತೆ ಐಶ್ವರ್ಯ ಅವರು ವೀಡಿಯೋ ಬಿಡುಗಡೆ ಮಾಡಿ ತಮ್ಮ ವರ್ತನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಐಶ್ವರ್ಯ ಗೌಡ ಹೇಳಿದ್ದೇನು?
“ಕಳೆದ ಆಗಸ್ಟ್ 12 ರಂದು ಭೀಮನ ಅಮಾವಾಸ್ಯೆಯ ಶುಭ ದಿನದಂದು ನಾನು ನನ್ನ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಉಕ್ಕಡ ಮಾರಮ್ಮ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದೆ. ಅಂದು ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಸೇರಿದ್ದರು. ನನ್ನೊಂದಿಗೆ ಇಬ್ಬರು ಸಣ್ಣ ಮಕ್ಕಳಿದ್ದ ಕಾರಣ, ಅವರೊಂದಿಗೆ ಬೇಗ ದರ್ಶನ ಪಡೆದು ಹೊರಬರಲು ಮುಂದಾದೆ. ಈ ವೇಳೆ ಅಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಹಾಗೂ ನನ್ನ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು.”
“ಜನಸಂದಣಿ ಹಾಗೂ ಪರಿಸ್ಥಿತಿಯ ಉದ್ವೇಗದಿಂದಾಗಿ ಅಲ್ಲಿ ಅಹಿತಕರ ಘಟನೆ ನಡೆದುಹೋಯಿತು. ನಿಜಕ್ಕೂ ಈ ರೀತಿಯ ಘಟನೆ ನಡೆಯಬಾರದಿತ್ತು. ನಡೆದ ಘಟನೆಯ ಬಗ್ಗೆ ನನಗೆ ತೀವ್ರ ವಿಷಾದವಿದೆ. ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ಇದರಿಂದ ಮನಸ್ಸಿಗೆ ನೋವಾಗಿದ್ದರೆ, ನಾನು ಅವರಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದು ಐಶ್ವರ್ಯ ತಮ್ಮ ವೀಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಆಗಸ್ಟ್ 12 ರಂದು ಆರತಿ ಉಕ್ಕಡ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಿಸುವ ವಿಚಾರವಾಗಿ ಐಶ್ವರ್ಯ ಗೌಡ ಹಾಗೂ ಪಿಎಸ್‌ಐ ಸವಿತಾ ಪಾಟೀಲ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಐಶ್ವರ್ಯ ಅವರು ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದರೆನ್ನಲಾದ ದೃಶ್ಯಗಳು ಮತ್ತು ಸಿಸಿಟಿವಿ ಫೂಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಸಕರ ಪುತ್ರಿಯ ದರ್ಪದ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಇದೀಗ ನ್ಯಾಯಾಲಯದ ಸೂಚನೆಯಂತೆ ಐಶ್ವರ್ಯ ಕ್ಷಮೆ ಯಾಚಿಸಿದ್ದಾರೆ.





