ಕುವೆಂಪು ವಿರಚಿತ ನಾಡಗೀತೆಯಲ್ಲಿ ಬದಲಾವಣೆ! ಇಷ್ಟು ದಿನ ಬಿಟ್ಟಿದ್ದ ಆ ಪದ ಮತ್ತೆ ಸೇರ್ಪಡೆ!

ಬೆಂಗಳೂರು: ಕನ್ನಡಿಗರ ಶ್ರೀಮಂತ ಇತಿಹಾಸ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಸಾರುವ ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ‘ ನಾಡಗೀತೆಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇಷ್ಟು ದಿನಗಳ ಕಾಲ ನಾಡಗೀತೆಯಲ್ಲಿ ಕೈಬಿಡಲಾಗಿದ್ದ ಬೌದ್ಧ ಧರ್ಮದ ಹೆಸರನ್ನು ಮತ್ತೆ ಸೇರ್ಪಡೆಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಪ್ರಮುಖ ಸಲಹೆ ನೀಡಿದೆ. ಪ್ರಸ್ತುತ ದಿನಗಳಲ್ಲಿ ಬೌದ್ಧ ಧರ್ಮದ ಸಾಂಸ್ಕೃತಿಕ ಪ್ರಚಲಿತತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇದರ ಪ್ರಕಾರ, ಪ್ರಸ್ತುತ ನಾಡಗೀತೆಯಲ್ಲಿರುವ ‘ಜೈನರುದ್ಯಾನ’ ಎಂಬ ಪದದ ಬದಲಿಗೆ ಇನ್ಮುಂದೆ ‘ಜೈನಬೌದ್ಧರುದ್ಯಾನ’ ಎಂದು ಸಾಲುಗಳನ್ನು ಪರಿಷ್ಕರಿಸಲಾಗುತ್ತದೆ. ಕುವೆಂಪು ಅವರು ಬರೆದಿದ್ದ ಮೂಲ ಕಾವ್ಯದಲ್ಲಿ ಬೌದ್ಧ ಧರ್ಮದ ಉಲ್ಲೇಖವಿತ್ತಾದರೂ, ಕಾಲಕ್ರಮೇಣ ಅದನ್ನು ತೆಗೆದುಹಾಕಲಾಗಿತ್ತು. ಈಗ ಕುವೆಂಪು ಅವರ ಆ ಮೂಲ ಆಶಯಕ್ಕೆ ಮರುಜೀವ ನೀಡಲಾಗುತ್ತಿದೆ. ಕೇವಲ ಪದದ ಸೇರ್ಪಡೆ ಮಾತ್ರವಲ್ಲದೆ, ಗೀತೆಯನ್ನು ಹಾಡುವಾಗ ದಿವಂಗತ ಮೈಸೂರು ಅನಂತಸ್ವಾಮಿ ಅವರ ಜನಪ್ರಿಯ ರಾಗ ಹಾಗೂ ಧಾಟಿಯಲ್ಲೇ ಈ ಹೊಸ ಪದವನ್ನೂ ಒಗ್ಗೂಡಿಸಿ ಗಾಯನ ಸಂಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಈ ಹೊಣೆಗಾರಿಕೆಯನ್ನು ಡಾ. ಪುಷೋತ್ತಮ ಬಿಳಿಮಲೆ ಸೇರಿದಂತೆ ಹಿರಿಯ ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ನಿವೃತ್ತ ಕುಲಪತಿ ಡಾ. ಚಿದಾನಂದ ಗೌಡ, ಪ್ರೊ. ಕಾಳೇಗೌಡ, ಎಸ್.ಜಿ ಸಿದ್ದರಾಮಯ್ಯ, ಡಾ. ಮೂಡ್ನಕೂಡು ಚಿನ್ನಸ್ವಾಮಿ, ಡಾ. ಸಿ.ಎಸ್. ದ್ವಾರಕನಾಥ್, ಡಾ. ಮೀನಾಕ್ಷಿ ಬಾಳಿ ಹಾಗೂ ಡಾ. ಎಂ.ಎಸ್ ಆಶಾದೇವಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಗೆ ವಹಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ, ಅಂದರೆ 1924ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಲ್ಲಿ ಈ ಐತಿಹಾಸಿಕ ನಾಡಗೀತೆಯನ್ನು ಬರೆದಿದ್ದರು. ಕುವೆಂಪು ಅವರ ಪ್ರಸಿದ್ಧ ‘ಕೊಳಲು’ ಕವನ ಸಂಕಲನದ ಮೂಲಕ ಮೊದಲು ಬೆಳಕು ಕಂಡ ಈ ಗೀತೆಗೆ ಇತ್ತೀಚೆಗಷ್ಟೇ ಭವ್ಯ ನೂರು ವರ್ಷಗಳು ತುಂಬಿದ್ದು, ನಾಡಿನಾದ್ಯಂತ ಶತಮಾನೋತ್ಸವವನ್ನು ಸಡಗರದಿಂದ ಆಚರಿಸಲಾಗಿತ್ತು. ಈ ಐತಿಹಾಸಿಕ ಮೈಲಿಗಲ್ಲಿನ ಬೆನ್ನಲ್ಲೇ ಈಗ ನಾಡಗೀತೆಯನ್ನು ಹೊಸ ರೂಪದಲ್ಲಿ ಹೊರತರಲು ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಸರ್ಕಾರ ಅಧಿಕೃತ ಕ್ರಮ ಕೈಗೊಳ್ಳುತ್ತಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others