ಕೋಲಾರದಲ್ಲಿ ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹ*ತ್ಯೆ

ಕೋಲಾರ: ಸಾಲಗಾರರ ಕಿರುಕುಳ ಹಾಗೂ ಸಾಲದ ಹೊರೆ ತಾಳಲಾರದೆ ಇಬ್ಬರು ಯುವ ಮಕ್ಕಳೊಂದಿಗೆ ತಾಯಿಯೊಬ್ಬರು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿ ಸಂಭವಿಸಿದೆ.

ಮೃತರ ವಿವರ

ಬೆಗ್ಲಿಬೆಣಜೇನಹಳ್ಳಿ ಗ್ರಾಮದ ನಿವಾಸಿ ಪ್ರಮೀಳ (40) ಹಾಗೂ ಅವರ ಮಗಳು ಸ್ವಪ್ನ (22) ಮತ್ತು ಮಗ ಚರಣ್ (18) ಆತ್ಮಹತ್ಯೆಗೆ ಶರಣಾದ ದುರದೃಷ್ಟಕರ ಮೃತರು.

ದುರಂತಕ್ಕೆ ಕಾರಣವೇನು?

ಮೃತರ ಪತಿ ಸುರೇಶ್ ಅವರು ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದು, ಪತ್ನಿ ಪ್ರಮೀಳ ಮನೆ ಮನೆ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದರು. ಈ ದಂಪತಿ ಕಷ್ಟಪಟ್ಟು ತಮ್ಮಿಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಆದರೆ, ಇತ್ತೀಚೆಗೆ ನೂತನ ಮನೆ ನಿರ್ಮಾಣಕ್ಕಾಗಿ ಖಾಸಗಿ ಫೈನಾನ್ಸ್, ವಿವಿಧ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಸುಮಾರು 15 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದರು.

ಸಾಲ ತೀರಿಸಲಾಗದೆ ಸಂಘದವರು ಹಾಗೂ ಖಾಸಗಿ ಫೈನಾನ್ಸ್‌ನವರು ಪದೇ ಪದೇ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಸುರೇಶ್ ಆಟೋ ಚಾಲನೆ ಮುಗಿಸಿ ಮನೆಗೆ ಬಂದಾಗ ಪತಿ-ಪತ್ನಿ ನಡುವೆ ತೀವ್ರ ಗಲಾಟೆ ನಡೆದಿದೆ. ಸಾಲದ ಒತ್ತಡದಿಂದ ತೀವ್ರ ಮನನೊಂದ ಪ್ರಮೀಳ, ರಾತ್ರಿ ಸುಮಾರು 1 ಗಂಟೆಯ ವೇಳೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಬಂದಿದ್ದಾರೆ.

ರಾತ್ರಿಯಿಡೀ ಹುಡುಕಾಟ, ಬೆಳಗಾಗುವುದರಲ್ಲಿ ಶವವಾಗಿ ಪತ್ತೆ

ಹೆಂಡತಿ-ಮಕ್ಕಳು ಮನೆಯಿಂದ ಹೊರಹೋದ ಬಳಿಕ ಆತಂಕಗೊಂಡ ಪತಿ ಸುರೇಶ್ ರಾತ್ರಿಯಿಡೀ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪತ್ನಿಗೆ ಕರೆ ಮಾಡಿದಾಗ, ಸಂಬಂಧಿಕರ ಮನೆಗೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಹೀಗಾಗಿ ಸುರೇಶ್ ಸುಮ್ಮನಾಗಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಛತ್ರಕೋಡಿಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಮೂವರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ.

ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others