ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವಾರದಿಂದ ಭಾರೀ ಮಳೆ ಆಗುತ್ತಿದ್ದು, ಇನ್ನು ಕೆಲವು ಕಡೆ ಮಳೆ ಬಾರದಂತಹ ಸನ್ನಿವೇಶ ಎದುರಾಗಿದೆ. ಹಲವು ಕಡೆ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದ್ದು, ಜನರು ಹೊರ ಬರಲು ಆಗದಂತಹ ಸ್ಥಿತಿ ಎದುರಾಗಿದೆ.
ಇತ್ತ ಮುಂಗಾರು ಬಿತ್ತಿದ ರೈತರಲ್ಲಿ ಈ ಮಳೆ ವಾತಾವರಣ ಸಂಪೂರ್ಣ ಖುಷಿ ತಂದಿಲ್ಲ. ಕಾರಣ ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂದರೂ ಸಹಿತ ನಿರೀಕ್ಷಿತ ಭಾರೀ ಮಳೆ ಆಗದೇ, ಕೆವಲ ಸೋನೆ ಮಳೆ ಆಗುತ್ತಿದೆ. ಇದರಿಂದ ಎರಡು ತಿಂಗಳ ಮುಂಗಾರು ಪೈರಿಗೆ ಮಳೆ ಸಾಕಾಗುತ್ತಿಲ್ಲ. ಕೆಲವೆಡೆ ಒಣಗಿದ ಬೆಳೆ ಹಾಗೆಯೇ ಇದೆ ಎಂದು ರೈತರು ತಿಳಿಸಿದ್ದಾರೆ.
ಇಂದಿನಿಂದ ಮುಂದಿನ ಜುಲೈ 31ರವರೆಗೆ ಒಟ್ಟು ಐದು ದಿನಗಳ ಕಾಲ ಸುಮಾರು 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಉಡುಪಿ, ಉತ್ತರ, ಕನ್ನಡ ದಕ್ಷಿಣ ಹಾಗೂ ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧರಣದಿಂದ ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆ ಮುನ್ಸೂಚನೆ ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಿದೆ.
ಒಳನಾಡು ಭಾಗಗಳಲ್ಲಿ ಆಗಾಗ ಸೋನೆ ಮತ್ತು ಹಗುರ ಮಳೆ ಸುರಿಯುತ್ತಿದೆ. ವಾಯು ಚಂಡಮಾರುತ ಪ್ರಸರಣದಿಂದಾಗಿ ಇನ್ನೂ ಕೆಲವು ದಿನಗಳ ಕಾಲ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇತ್ತ ಕೆವು ಕಡೆ ಜೂನ್‌ನಲ್ಲಿ ಬಿತ್ತಿದ ಬೆಂಡೆ ಇನ್ನಿತರ ಬೀಜಗಳು ಹೊಲದಲ್ಲಿ ಈಗ ಮೊಳಕೆ ಒಡೆದು ಸಸಿಯಾಗಿದ್ದು ವಾರದಿಂದ ಮಳೆ ಸಕ್ರಿಯವಾಗಿದ್ದರೂ ನಿರೀಕ್ಷಿತ ಮಳೆ ಆಗದ ಹಿನ್ನೆಲೆಯಲ್ಲಿ ಭಾರೀ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ.
ಬಂಗಾಳಕೊಲ್ಲಿ ಹಾಗೂ ಒಡಿಶಾ ಕರಾವಳಿ ಭಾಗದ ಸಮೀಪದ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ ಬಂಗಾಳದಿಂದ ಸುಮಾರು 130 ಕಿಲೋ ಮೀಟರ್, ದಕ್ಷಿಣ ಸುಮಾರು 140 ಕಿಲೋ ಮೀಟರ್ ದಕ್ಷಿಣ ಪೂರ್ವಕ್ಕೆ ವ್ಯಾಪಿಸಿದೆ. ಒಡಿಶಾದಿಂದ ಸುಮಾರು 170 ಕಿ.ಮೀ. ಪೂರ್ವದಲ್ಲಿ ಕೇಂದ್ರೀಕತವಾಗಿದೆ.
ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಬಲಗೊಂಡು ಆಳವಾದ ವಾಯುಭಾರ ಕುಸಿತ) ಆಗುವ ಸಾಧ್ಯತೆ ಇದೆ. ಈ ಕಾರಣದಿಂದ ವಿವಿಧ ಕಡೆಗಳಲ್ಲಿ ಹವಾಮಾನ, ಮಳೆಯಲ್ಲಿ ಒಂದಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಬೆಂಳಗೂರು ನಗರ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಣ್ಮರೆಯಾಗಿದೆ. ಕೆಲವೆಡೆ ಹಗುರ ಮಳೆಯ ಸುರಿಯುತ್ತಿದ್ದು, ಆಗಾಗ ಬಿಸಿಲಿನ ದರ್ಶನವಾಗುತ್ತಿದೆ. ಮುಂದಿನ ಒಂದು ವಾರ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎನ್ನಲಾಗಿದೆ.
ಮೂರು ದಿನ ನಂತರ ಕರಾವಳಿಯಲ್ಲಿ ಮಳೆ ಪ್ರಮಾಣ ತಗ್ಗಲಿದ್ದು, ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮತ್ತು ಭಾರೀ ಮಳೆ ಆಗಲಿದೆ. ಕಳೆದ ಸುಮಾರು ಎಂಟು-ಹತ್ತು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ತಂಪು, ದಿನವಿಡೀ ಮಬ್ಬು ವಾತಾವರಣವಿದೆ. ಒಂದೆರಡು ಕಡೆಗಳಲ್ಲಿ ಜೋರು ಮಳೆ ಬಿಟ್ಟರೆ, ಉಳಿದ ಕಡೆಗಳಲ್ಲಿ ತುಂತುರು, ಜಿಟಿ ಜಿಟಿ ಮಳೆ ಆಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.





