ಬೆಂಗಳೂರು: ಕೌಟುಂಬಿಕ ವಿವಾದ ಹಾಗೂ ಹಣದ ಬೇಡಿಕೆಯ ಹಿನ್ನೆಲೆಯಲ್ಲಿ, ತಂದೆಯೊಬ್ಬ ತಾನು ಸಾಕಿ ಬೆಳೆಸಿದ ಮಗಳ ಮೇಲೆಯೇ ಕಾಲೇಜಿನ ಆವರಣದಲ್ಲೇ ಭೀಕರವಾಗಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆಯಲ್ಲಿ ನಡೆದಿದೆ. ಜುಲೈ 25ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜಾನುಕುಂಟೆಯ ಎಸ್‌ವಿಐಟಿ (SVIT) ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ (ಅಸಿಸ್ಟೆಂಟ್ ಪ್ರೊಫೆಸರ್) ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀದುರ್ಗಾ ಹಲ್ಲೆಗೊಳಗಾದ ಮಗಳು. ಕೃತ್ಯ ಎಸಗಿದ ಆಕೆಯ ತಂದೆ, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ನಾಗೇಂದ್ರ ಎಂಬಾತನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.
ಎಚ್‌ಒಡಿ ಕ್ಯಾಬಿನ್‌ನಲ್ಲೇ ಚಾಕು ಇರಿತ: ಜುಲೈ 25ರಂದು ಕಾಲೇಜಿಗೆ ಬಂದಿದ್ದ ಆರೋಪಿ ನಾಗೇಂದ್ರ, ಹೆಚ್‌ಒಡಿ (HOD) ಕ್ಯಾಬಿನ್‌ಗೆ ತೆರಳಿ ಮಗಳನ್ನು ನೋಡಬೇಕೆಂದು ತಿಳಿಸಿದ್ದ. ತಂದೆಯನ್ನು ಭೇಟಿಯಾಗಲು ಮಗಳು ಲಕ್ಷ್ಮೀದುರ್ಗಾ ಕ್ಯಾಬಿನ್‌ಗೆ ಬರುತ್ತಿದ್ದಂತೆ, ಆಕೆಯ ಮೇಲೆ ಮುಗಿಬಿದ್ದ ನಾಗೇಂದ್ರ ತಂದಿದ್ದ ಚಾಕುವಿನಿಂದ ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮೀದುರ್ಗಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಣದ ದುರಾಸೆಯೇ ದಾಳಿಗೆ ಕಾರಣ: ಪೊಲೀಸರ ತನಿಖೆ ವೇಳೆ ಕೃತ್ಯಕ್ಕೆ ಕಾರಣ ಭಾರಿ ಹಣದ ಬೇಡಿಕೆ ಎಂಬುದು ತಿಳಿದುಬಂದಿದೆ. ಮಗಳು ಲಕ್ಷ್ಮೀದುರ್ಗಾಗೆ ಮದುವೆ ಮಾಡಲು ಪೋಷಕರು ಗಂಡು ನೋಡಿದ್ದು, ಮದುವೆಗೆ ಹುಡುಗನ ಮನೆಯವರೂ ಒಪ್ಪಿಕೊಂಡಿದ್ದರು. ಆದರೆ, ಈ ವೇಳೆ ಮಧ್ಯಪ್ರವೇಶಿಸಿದ್ದ ತಂದೆ ನಾಗೇಂದ್ರ, “ಮಗಳನ್ನು ಕಷ್ಟಪಟ್ಟು ಓದಿಸಿದ್ದೇನೆ, ಹೀಗಾಗಿ ಮದುವೆಯಾಗಲು ನನಗೇ 40 ಲಕ್ಷ ರೂಪಾಯಿ ಕೊಡಬೇಕು” ಎಂದು ಹುಡುಗನ ಮನೆಯವರ ಬಳಿ ಶರತ್ತು ವಿಧಿಸಿದ್ದ. ಅಷ್ಟೇ ಅಲ್ಲದೆ, ಮಗಳು ಪ್ರತಿ ತಿಂಗಳು ಪಡೆಯುವ ಇಡೀ ಸಂಬಳವನ್ನೂ ತನಗೇ ನೀಡಬೇಕೆಂದು ಪಟ್ಟು ಹಿಡಿದಿದ್ದ.
ತಂದೆಯ ಈ ಅನಗತ್ಯ ಬೇಡಿಕೆ ಮತ್ತು ಕಿರುಕುಳಕ್ಕೆ ಹೆಂಡತಿ ಹಾಗೂ ಮಗಳು ಲಕ್ಷ್ಮೀದುರ್ಗಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕುಟುಂಬದಲ್ಲಿ ತೀವ್ರ ವೈಮನಸ್ಸು ಉಂಟಾಗಿ ನಿತ್ಯ ಜಗಳ ನಡೆಯುತ್ತಿತ್ತು. ಇದೇ ಆಕ್ರೋಶದಲ್ಲಿದ್ದ ನಾಗೇಂದ್ರ, ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೇ ನೇರವಾಗಿ ಬಂದು ಈ ಕ್ರೂರ ಕೃತ್ಯ ಎಸಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿದ್ದ ರಾಜಾನುಕುಂಟೆ ಠಾಣೆ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ನಾಗೇಂದ್ರನನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.





