ಕರ್ನಾಟಕದ ಕೆಲವು ಭಾಗಗಳಲ್ಲಿ ವರುಣ ಅಬ್ಬರ: ಎಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿತ್ತು, ಕೆಲವು ಕಡೆ ನಿರಂತರ ಮಳೆಗೆ ಜನ ಬೇಸತ್ತಿದ್ದಾರೆ. ಇನ್ನು ಕೆಲವು ಕಡೆ ರೈತರು ಮಳೆ ಬಂತು ಮಳೆ ಎಂದು ಸಂತಸ ಪಟ್ಟಿದ್ದಾರೆ. ಹಲವು ಭಾಗಗಳಲ್ಲಿ ವರುಣ ಅಬ್ಬರದಿಂದ ಕೆಲವು ಅನಾಹುತಗಳಾಗಿದೆ.

ಇತ್ತ ದಕ್ಷಿಣ ಕನ್ನಡದ ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಯಿಲ ಗ್ರಾಮಕ್ಕೆ ಎನ್‌ಡಿಆರ್‌ಎಫ್‌ ತಂಡ ಆಗಮಿಸಿದೆ. 30 ಮಂದಿಯ ಎನ್‌ಡಿಆರ್‌ಎಫ್‌ ತಂಡ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿದೆ ಎನ್ನಲಾಗಿದೆ.

ಭಾರೀ ಮಳೆಯಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿ ಪಟ್ಟಣದ ತಮ್ಮಡಿಕೊಪ್ಪ ಕೆರೆ ಹತ್ತಿರ ನಡೆದಿದೆ.

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಪ್ರಮುಖ ಕೊಯ್ನಾ ಜಲಾಶಯಕ್ಕೆಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಪ್ರಸ್ತುತ ಜಲಾಶಯಕ್ಕೆ 49,000 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಕೃಷ್ಣಾ ನದಿಗೆ 34,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಈಗಾಗಲೇ 91 ಟಿಎಂಸಿ ನೀರು ಭರ್ತಿಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆಗಸ್ಟ್‌ 1 ಶನಿವಾರ ಬೆಳಗ್ಗೆ 8:30 ರಿಂದ ಆಗಸ್ಟ್‌ 2ರ 7:30ರ ವೇಳೆಗೆ 50 ಮಿ ಮೀಗಿಂತ ಹೆಚ್ಚು ಮಳೆಯಾದ ಸ್ಥಳಗಳ ವಿವರವನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆಯಲ್ಲಿ ದಾಖಲೆಯ 348.5 ಮಿ.ಮೀ ಮಳೆಯಾಗಿದ್ದರೆ, ಅದೇ ತಾಲೂಕಿನ ಕಲ್ಮಂಜದಲ್ಲಿ 283.5 ಮಿ.ಮೀ ಮಳೆಯಾಗಿದೆ.

ಧಾರಾಕಾರ ಮಳೆಯ ಪರಿಣಾಮವಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಹಂತದವರೆಗೂ ಪ್ರವಾಹದ ನೀರು ಬಂದಿದ್ದು, ಭಾಗಮಂಡಲ – ನಾಪೋಕ್ಲು ನಡುವಿನ ಮುಖ್ಯ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಹಾಸನದ ಸಕಲೇಶಪುರ ‌ತಾಲ್ಲೂಕಿನ, ಯಡಕುಮರಿ-ಶಿರವಾಗಿಲು ಬಳಿ ಗುಡ್ಡ ಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಮಾರ್ಗದ ಎಲ್ಲಾ ರೈಲುಗಳ ಪ್ರಯಾಣ ರದ್ದು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಮಣ್ಣು ತೆರವು ಕಾಮಗಾರಿಯನ್ನು ರೈಲ್ವೇ ಇಲಾಖೆ ಆರಂಭಿಸಿದೆ. ಲುಗಳ ರದ್ದತಿಯಿಂದ ಪ್ರಯಾಣಿಕರ‌ ಪರದಾಟುತ್ತಿದ್ದಾರೆ

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಡಿಕೇರಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಭಾಗಮಂಡಲ ಗ್ರಾಮ ಕೇಂದ್ರ ಸಂಪೂರ್ಣವಾಗಿ ಜಲಾವೃತವಾಗಿದೆ. ತ್ರಿವೇಣಿ ಸಂಗಮವು ಸಂಪೂರ್ಣವಾಗಿ ನೀರಿನಿಂದ ಆವೃತಗೊಂಡಿದ್ದು, ಸಂಗಮದ ಪಕ್ಕದಲ್ಲಿರುವ ಸ್ನಾನಘಟ್ಟಗಳು ಹಾಗೂ ಉದ್ಯಾನವನಗಳು ಸಹ ಮುಳುಗಡೆಯಾಗಿವೆ. ಮಳೆಯ ತೀವ್ರತೆಗೆ ಭಾಗಮಂಡಲ-ತಲಕಾವೇರಿ ಮಾರ್ಗದ ರಸ್ತೆಯು ಸಹ ನೀರಿನಿಂದ ಆವರಿಸಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಫ್ಲೈ ಓವರ್ ಮೂಲಕ ಓಡಾಡುತ್ತಿದ್ದಾರೆ.

ಇತ್ತ ಉತ್ತರ ಕಾರ್ನಾಟದ ಕೆಲವು ಭಾಗಗಳಲ್ಲಿ ಮಳೆ ಎಂಟ್ರಿ ಕಡಿಮೆ ರೀತಿಯಲ್ಲಿ ಇದ್ದು ಮಳೆಗಾಗಿ ಕೆಲವು ಗ್ರಾಮಸ್ಥರು ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others