ಮೈಸೂರು : “ಎಲ್ಲರಿಗೂ ನನ್ನ ನಮಸ್ಕಾರಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದರು. ಇದನ್ನು ಕಂಡು ಪ್ರೇಕ್ಷಕರು ಭಾರೀ ಚಪ್ಪಾಳಿ ತಟ್ಟಿದರು. ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ಉದ್ಘಾಟನೆ ಮಾಡಿದ ಬಳಿಕ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,“ಮೈಸೂರು ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗಿದೆ. ಭಾರತದ ಪರಂಪರೆಯು ಈ ನಗರದ ಪ್ರತಿಯೊಂದು ಮೂಲೆಯಲ್ಲೂ ಹಾಸುಹೊಕ್ಕಿದೆ. ಮೈಸೂರು ಭಾರತದ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾರಿಗಾಗಿ ‘ರಾಷ್ಟ್ರವೇ ಪ್ರಥಮ’ ಎಂಬುದು ಪರಮ ಮಾರ್ಗದರ್ಶನ ತತ್ವವಾಗಿದೆಯೋ ಮತ್ತು ಯಾರ ಜೀವನದ ಗುರಿಯು ಭಾರತ ಮಾತೆಯ ಸೇವೆಯೋ ಅಂತಹ ಯುವಕರನ್ನು ರೂಪಿಸಬೇಕಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
“ವಿವೇಕ ಸ್ಮಾರಕವು ಸಾಧಕರಿಗೆ ಮತ್ತು ಭಕ್ತರಿಗೆ ಆಧ್ಯಾತ್ಮಿಕ ತೀರ್ಥಕ್ಷೇತ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಈ ವಿವೇಕ ಸ್ಮಾರಕದ ಮೂಲಕ, ವೈಯಕ್ತಿಕ ಸುಖ-ದುಃಖಗಳಿಗಿಂತ ಸಮಾಜದ, ರಾಷ್ಟ್ರದ ಹಿತಾಸಕ್ತಿ ಹಾಗೂ ಬಡವರು ಮತ್ತು ದೀನದಲಿತರ ಸಂಕಷ್ಟಗಳಿಗೆ ಅಗ್ರಸ್ಥಾನ ನೀಡುವ ಯುವ ಜನತೆಯನ್ನು ನಾವು ರೂಢಿಸಬೇಕಾಗಿದೆ ಎಂದರು.
“ಇಂದು ದೇಶದಲ್ಲಿ ಸುಮಾರು 1,40,000 ಎಂಬಿಬಿಎಸ್ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು 21 ನೇ ಶತಮಾನಕ್ಕೆ ಸಿದ್ಧಪಡಿಸುತ್ತಿದೆ. ಬಾಲಕಿಯರು ಕೂಡ ಸೈನಿಕ್ ಶಾಲೆಗೆ ಸೇರುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.
ಯಾವುದೇ ದೇಶದಲ್ಲಿ, ಯುವಕರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತನೆಯಾಗುವುದು ಅವರಿಗೆ ಸರಿಯಾದ ಅವಕಾಶಗಳು ಮತ್ತು ಮಾರ್ಗದರ್ಶನ ಸಿಕ್ಕಾಗ ಮತ್ತು ಸ್ವಂತ ನೆಲದಲ್ಲಿ ದೊಡ್ಡ ಕನಸುಗಳನ್ನು ಕಾಣುವ, ಆ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ದೊರೆತಾಗ ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು.
“ಮೈಸೂರಿನ ರಾಮಕೃಷ್ಣ ಆಶ್ರಮದ ಸೇವೆ ಅಪಾರ. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಮೊಬೈಲ್ ಉತ್ಪಾದನೆ, ಎಐ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಎಂದು ಮೋದಿ ಹೇಳಿದ್ದಾರೆ.
ತಾಯಿ ಚಾಮುಂಡೇಶ್ವರಿಗೆ ಪ್ರಣಾಮಗಳು. 2 ದಿನಗಳ ಹಿಂದೆ ಗುರು ಪೂರ್ಣಿಮೆ ಆಚರಿಸಿದ್ದೇವೆ. ನನ್ನ ಜೀವನದ ಯಾತ್ರೆಯಲ್ಲಿ ರಾಮಕೃಷ್ಣ ಅಶ್ರಮದ ಪಾತ್ರ ಮಹತ್ವದ್ದು. ಮೈಸೂರಿನ ರಾಮಕೃಷ್ಣ ಅಶ್ರಮಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ದಸರಾ, ಪರಂಪರೆ, ಅರಮನೆ, ಇಲ್ಲಿನ ಸಂಸ್ಕೃತಿ, ಸಂಗೀತ, ಸಾಹಿತ್ಯ ಇಡೀ ದೇಶದ ಗಮನ ಸೆಳೆದಿದೆ. ಮತ್ತೊಮ್ಮೆ ಮೈಸೂರಿಗೆ ಆಗಮಿಸಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ” ಎಂದಿದ್ದಾರೆ.





