ಚೆನ್ನೈ:ಇಂದು ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿ ನೀರಿನ ವಿಚಾರವಾಗಿ ಬಿಸಿ ಬಿಸಿ ಚರ್ಚೆಯಾಗಿದ್ದು, ಸಿಎಂ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಸದನದಲ್ಲಿ ತೀವ್ರ ವಾಗ್ವಾಳಿ ನಡೆಯಿತು.
ಮೇಕೆದಾಟು ಅಣೆಕಟ್ಟು ಮತ್ತು ಕಾವೇರಿ ನೀರಿನ ವಿವಾದದ ಕುರಿತು ಸರ್ವಪಕ್ಷ ಸಭೆಯ ಅಗತ್ಯವಿಲ್ಲ ಎಂದು ಸಿಎಂ ವಿಜಯ್ ಸ್ಪಷ್ಟಪಡಿಸಿದ್ದು,ಕಾವೇರಿ ನೀರಿನ ಸಮಸ್ಯೆ ಮತ್ತು ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಕ್ರಮದ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್, ನೆರೆಯ ರಾಜ್ಯದಲ್ಲಿ ಅಣೆಕಟ್ಟು ಯೋಜನೆಯನ್ನು ನಿಲ್ಲಿಸಲು ವಿಜಯ್ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ಭೇಟಿ ನೀಡುವ ತಮ್ಮ ಪ್ರಸ್ತಾಪ ಸಮರ್ಥಿಸಿಕೊಂಡ ವಿಜಯ್, ನೆರೆಯ ರಾಜ್ಯದೊಂದಿಗೆ ಮಾತನಾಡುವುದರಲ್ಲಿ ಏನು ತಪ್ಪಿದೆ ಅಂತಹ ಪ್ರಯತ್ನದಿಂದ ನಮಗೆ ಅವಮಾನವಾದರೆ ಏನು ಎಂದು ಕೆಲವರು ಕೇಳಿದರು. ಅದು ಸಂಭವಿಸಿದರೂ, ತಮಿಳುನಾಡಿನ ಜನರಿಗಾಗಿ ನಾನು ಅವಮಾನ ಅನುಭವಿಸಲು ಸಿದ್ಧನಿದ್ದೇನೆ ಎಂದರು. ವಿರೋಧಿ ರಾಷ್ಟ್ರಗಳು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವಾಗ, ನಮ್ಮ ನೆರೆಯ ರಾಜ್ಯದೊಂದಿಗೆ ಮಾತುಕತೆ ನಡೆಸುವ ಬಗ್ಗೆ ನಾನು ಯೋಚಿಸಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಆರೋಪಗಳಿಗೆ ತಿರುಗೇಟು ನೀಡಿದ ಸಿಎಂ, ಮೇಕೆದಾಟು ಅಣೆಕಟ್ಟಿನ ವಿರುದ್ಧ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಯೋಜನೆಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ತಮಿಳುನಾಡು ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ತಿಳಿಸಿದರು. ನಂತರ ಅವರು ಡಿಎಂಕೆ ವಿರುದ್ಧ ತಿರುಗಿ ಬಿದ್ದರು. 1969 ರಲ್ಲಿ ಅವರ ಸರ್ಕಾರವೇ ಕರ್ನಾಟಕ ಯೋಜನೆಗೆ ಮೊದಲು ಅನುಮತಿ ನೀಡಿತು ಎಂದು ಟಾಂಗ್ ಕೊಟ್ಟರು.
ಕರ್ನಾಟಕವು ಸರ್ವಪಕ್ಷ ಸಭೆಯನ್ನು ಕರೆದಿದೆ. ಅವರ ಹಕ್ಕುಗಳಿಗಾಗಿ, ಎಲ್ಲಾ ಪಕ್ಷದವರೂ ಒಂದೇ ತಂಡವಾಗಿ ಒಂದಾಗಿದ್ದಾರೆ. ಮೇಕೆದಾಟು ವಿಷಯದ ಕುರಿತು ಸರ್ವಪಕ್ಷ ಸಭೆಗೆ ವಿಜಯ್ ಸರ್ಕಾರದ ಪ್ರತಿರೋಧವನ್ನು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು. ಮೇಕೆದಾಟು ವಿಷಯದಲ್ಲಿ ತಮಿಳು ಪರವಾಗಿ ಒಗ್ಗಟ್ಟನ್ನು ಪ್ರದರ್ಶಿಸಲು ಸರ್ವಪಕ್ಷ ಸಭೆಯ ಕಲ್ಪನೆಯನ್ನು ಟಿವಿಕೆ ಸರ್ಕಾರ ಏಕೆ ತಿರಸ್ಕರಿಸುತ್ತಿದೆ ಎಂದು ವಿಪಕ್ಷದ ನಾಯಕ ಪ್ರಶ್ನಿಸಿದರು.
ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.ಕರ್ನಾಟಕವು ಮೇಕೆದಾಟು ಅಣೆಕಟ್ಟಿನ ಕಾಮಗಾರಿಯನ್ನು ಮುಂದುವರಿಸದಂತೆ ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಸರ್ಕಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಬೇಕು ಎಂದು ಸಿಎಂಗೆ ಉದಯನಿಧಿ ತಿಳಿಸಿದ್ದಾರೆ.





