World Lion Day: “ವಿಶ್ವ ಸಿಂಹ ದಿನ” ಭಾರತದ ಸಂಸ್ಕೃತಿಯಲ್ಲಿ ಕಾಡಿನ ರಾಜನ ಇತಿಹಾಸ ಇಲ್ಲಿದೆ ನೋಡಿ

ಪ್ರತಿ ವರ್ಷ ಆಗಸ್ಟ್ 10 ರಂದು ಜಗತ್ತಿನಾದ್ಯಂತ ವಿಶ್ವ ಸಿಂಹ ದಿನ ಆಚರಿಸಲಾಗುತ್ತದೆ. ಕಾಡಿನ ರಾಜನ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ತಿಳಿಸುವುದೇ ಇದರ ಉದ್ದೇಶ. ಆದರೆ ಭಾರತಕ್ಕೆ ಈ ದಿನ ಇನ್ನೂ ವಿಶೇಷ. ಏಕೆಂದರೆ ಸಿಂಹವು ನಮ್ಮ ದೇಶದಲ್ಲಿ ಕೇವಲ ಒಂದು ಪ್ರಾಣಿಯಲ್ಲ, ಅದು ನಮ್ಮ ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ.

ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ ವರದಿಯ ಪ್ರಕಾರ ವಿಶ್ವದಲ್ಲಿ ಈಗ ಕೇವಲ 20,000 ರಿಂದ 23,000 ಕಾಡು ಸಿಂಹಗಳು ಮಾತ್ರ ಉಳಿದಿವೆ. ಕಳೆದ 100 ವರ್ಷಗಳಲ್ಲಿ ಆಫ್ರಿಕನ್ ಸಿಂಹಗಳ ಸಂಖ್ಯೆ ಶೇ. 90 ರಷ್ಟು ಕುಸಿದಿದೆ. ಆವಾಸಸ್ಥಾನ ನಾಶ, ಅಕ್ರಮ ಬೇಟೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಇದಕ್ಕೆ ಕಾರಣವಾಗಿದೆ.

ಆದರೆ ಈ ಕರಾಳ ಚಿತ್ರದ ನಡುವೆ ಭಾರತ ಒಂದು ಆಶಾದಾಯಕ ಕಥೆಯನ್ನು ಹೊಂದಿದೆ. ಏಷ್ಯಾದ ಏಕೈಕ ಸಿಂಹಗಳು ನಮ್ಮ ಗುಜರಾತ್‌ನ ಗಿರ್ ಅರಣ್ಯದಲ್ಲಿ ಮಾತ್ರ ಕಂಡುಬರುತ್ತವೆ. 1913 ರಲ್ಲಿ ಕೇವಲ 20 ಸಿಂಹಗಳು ಉಳಿದಿದ್ದ ಗಿರ್‌ನಲ್ಲಿ, 2020 ರ ಗಣತಿಯ ಪ್ರಕಾರ ಈಗ 674 ಏಷ್ಯನ್ ಸಿಂಹಗಳಿವೆ.ಇದು ಭಾರತದ ಸಂರಕ್ಷಣಾ ನೀತಿಯ ದೊಡ್ಡ ಯಶಸ್ಸು ಆಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಸಿಂಹ ದೇವರಿಂದ ರಾಷ್ಟ್ರದವರೆಗೆ ಭಾರತದಲ್ಲಿ ಸಿಂಹಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಧರ್ಮದ ರಕ್ಷಕನ್ನಾಗಿ ನಾವು ಸಿಂಹವನ್ನು “ಸಿಂಹವಾಹಿನಿ ದುರ್ಗೆ” ಯ ವಾಹನವಾಗಿ ಪೂಜಿಸುತ್ತೇವೆ. ದುರ್ಗಾಮಾತೆ ಸಿಂಹದ ಮೇಲೆ ಕುಳಿತು ಮಹಿಷಾಸುರನನ್ನು ಕೊಂದ ಕಥೆ ನಮಗೆ “ಅಧರ್ಮದ ವಿರುದ್ಧ ಧರ್ಮದ ಗೆಲುವು” ಕಲಿಸುತ್ತದೆ. ವಿಷ್ಣುವಿನ ನರಸಿಂಹ ಅವತಾರವು ಭಕ್ತನನ್ನು ರಕ್ಷಿಸಲು ಅನ್ಯಾಯದ ವಿರುದ್ಧ ಎದ್ದ ರೂಪ. ಹಾಗಾಗಿ ಸಿಂಹವು “ರಕ್ಷಣೆ ಮತ್ತು ನ್ಯಾಯ” ದ ಸಂಕೇತವಾಗಿದೆ.

ನಮ್ಮ ರಾಷ್ಟ್ರ ಘನತೆ ಲಾಂಛನವೇ ಅಶೋಕ ಸ್ತಂಭದ 4 ಸಿಂಹಗಳು. “ಸತ್ಯಮೇವ ಜಯತೆ” ಎಂಬ ಧ್ಯೇಯವಾಕ್ಯದೊಂದಿಗೆ ಸಿಂಹವು “ಶಕ್ತಿ, ಧೈರ್ಯ ಮತ್ತು ಅಧಿಕಾರ” ದ ಸಂಕೇತವಾಗಿದೆ. ನೋಟು, ಪಾಸ್ಪೋರ್ಟ್, ಸರ್ಕಾರಿ ಮುದ್ರೆ ಎಲ್ಲದರಲ್ಲೂ ಈ ಸಿಂಹವಿದೆ. ರಾಜರ ಕಾಲದಲ್ಲಿ “ಸಿಂಹಾಸನ” ಎಂದರೆ ರಾಜ್ಯಾಧಿಕಾರವೇ ಆಗಿತ್ತು.

ಕನ್ನಡದಲ್ಲಿ”ಒಂಟಿ ಸಿಂಹ” ಎಂದರೆ ಧೈರ್ಯಶಾಲಿ ಎಂದರ್ಥ. ಸಿಂಹ, ನರಸಿಂಹ, ಶೇರ್ ಸಿಂಗ್ ಎಂಬ ಹೆಸರುಗಳು ಶೌರ್ಯದ ಸಂಕೇತ. ಯಕ್ಷಗಾನದಲ್ಲಿ ಸಿಂಹ ವೇಷ, ಜಾನಪದ ಕಥೆಗಳಲ್ಲಿ ಸಿಂಹದ ಪಾತ್ರ ಎಲ್ಲವೂ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಹೀಗಾಗಿ ಸಿಂಹವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ.

ಗಿರ್ ಅರಣ್ಯ ಸಂಸ್ಕೃತಿ ಮತ್ತು ಪ್ರಕೃತಿಯ ಒಡನಾಟ ಇಲ್ಲಿದೆ ನೋಡಿ: ಗಿರ್ ಅರಣ್ಯದ ವಿಶೇಷತೆ ಏನೆಂದರೆ ಇಲ್ಲಿ ಮನುಷ್ಯ ಮತ್ತು ಸಿಂಹ ನೂರಾರು ವರ್ಷಗಳಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಗಿರ್ ಸುತ್ತ 52 ಹಳ್ಳಿಗಳಿವೆ. ಮಲ್ದಾರಿ ಸಮುದಾಯದ ಜನರು ಸಿಂಹಗಳೊಂದಿಗೆ ಸಹಬಾಳ್ವೆ ನಡೆಸುತ್ತಾರೆ. ಸಿಂಹವು ಅವರ ಜಾನುವಾರುಗಳನ್ನು ತಿಂದರೂ ಅವರು ಸೇಡು ತೀರಿಸಿಕೊಳ್ಳುವುದಿಲ್ಲ. ಇದು ಭಾರತೀಯ “ವಸುಧೈವ ಕುಟುಂಬಕಂ” ತತ್ವಕ್ಕೆ ಸಾಕ್ಷಿ.

ಗಿರ್‌ನ ಕಾಡು 1,412 ಚ.ಕಿ.ಮೀ ವಿಸ್ತಾರ. ಕಮಲೇಶ್ವರಿ ನದಿ, ಸಾಗವಾನ್ ಕಾಡು, ಹುಲ್ಲುಗಾವಲು ಈ ವೈವಿಧ್ಯಮಯ ಪರಿಸರವೇ 674 ಸಿಂಹಗಳಿಗೆ ಆಶ್ರಯ. ಸಿಂಹಗಳ ಜೊತೆಗೆ ಚಿರತೆ, ಜಿಂಕೆ, 300 ಕ್ಕೂ ಹೆಚ್ಚು ಪಕ್ಷಿಗಳೂ ಇಲ್ಲಿ ಕಂಡುಬರುತ್ತವೆ.

ಎದುರಾಗಿರುವ ಸವಾಲುಗಳು ಸಂಖ್ಯೆ ಹೆಚ್ಚಿದರೂ ಅಪಾಯ ತಪ್ಪಿಲ್ಲ. ಒಂದೇ ಸ್ಥಳಕ್ಕೆ ಸೀಮಿತ ಎಲ್ಲಾ ಏಷ್ಯನ್ ಸಿಂಹಗಳು ಗಿರ್‌ನಲ್ಲಿರುವುದು ದೊಡ್ಡ ಅಪಾಯ. ಒಂದು ರೋಗ ಬಂದರೆ ಇಡೀ ಜನಸಂಖ್ಯೆಗೆ ಕುತ್ತಾಗಿದ್ದು, ಮಾನವ-ಸಿಂಹ ಸಂಘರ್ಷ ಆಹಾರಕ್ಕಾಗಿ ಸಿಂಹಗಳು ಹಳ್ಳಿಗಳತ್ತ ಬರುತ್ತಿವೆ. ರಸ್ತೆ ಅಪಘಾತಗಳು ಹೆಚ್ಚುತ್ತಿವೆ.ಎರಡನೇ ಆವಾಸಸ್ಥಾನ ಸುಪ್ರೀಂ ಕೋರ್ಟ್ 2013 ರಲ್ಲೇ ಸಿಂಹಗಳನ್ನು ಮಧ್ಯಪ್ರದೇಶದ ಕೂನೋಗೆ ಸ್ಥಳಾಂತರಿಸಲು ಆದೇಶಿಸಿತ್ತು.

ಸಂರಕ್ಷಣೆಯ ಹಾದಿಯಲ್ಲಿ ಕೇಂದ್ರ ಸರ್ಕಾರ “ಪ್ರಾಜೆಕ್ಟ್ ಲಯನ್” ಅಡಿಯಲ್ಲಿ 2,900 ಕೋಟಿ ರೂ. ವೆಚ್ಚ ಮಾಡುತ್ತಿದೆ. ಎಐ ಕ್ಯಾಮೆರಾ, ರೋಗ ತಪಾಸಣೆ, ಹೊಸ ಆವಾಸಸ್ಥಾನ ಸೃಷ್ಟಿ ಇದರ ಭಾಗ. ಗುಜರಾತ್ ಸರ್ಕಾರ “ಲಯನ್ ಅಂಬಾಸಿಡರ್” ಯೋಜನೆಯ ಮೂಲಕ ಸ್ಥಳೀಯರನ್ನು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.ಆದರೆ ಸರ್ಕಾರದ ಜೊತೆಗೆ ನಮ್ಮ ಪಾತ್ರವೂ ಮುಖ್ಯ. ವಿಶ್ವ ಸಿಂಹ ದಿನದಂದು ನಾವು ಮಾಡಬಹುದಾದ್ದು,ವನ್ಯಜೀವಿ ಉತ್ಪನ್ನಗಳನ್ನು ಖರೀದಿಸದಿರುವುದು.

ಕಾಡಿಗೆ ಹೋದಾಗ ಪ್ಲಾಸ್ಟಿಕ್ ಬಿಸಾಡದಿರುವುದು.ಮಕ್ಕಳಿಗೆ ಸಿಂಹಗಳ ಮಹತ್ವದ ಬಗ್ಗೆ ಹೇಳುವುದು.ಪರಿಸರ ತಜ್ಞರು ಹೇಳುವಂತೆ, ಸಿಂಹವಿರುವ ಕಾಡು ಆರೋಗ್ಯಕರವಾಗಿರುತ್ತದೆಆಹಾರ ಸರಪಳಿಯ ಮೇಲಿರುವ ಪರಭಕ್ಷಕವನ್ನು ಉಳಿಸುವುದು ಇಡೀ ಪರಿಸರವನ್ನು ಉಳಿಸಿದಂತೆ.

ವಿಶ್ವ ಸಿಂಹ ದಿನವು ನಮಗೆ ಎರಡು ವಿಷಯ ನೆನಪಿಸುತ್ತದೆ. ಒಂದು, ಪ್ರಕೃತಿಯ ಸಮತೋಲನಕ್ಕೆ ಸಿಂಹದ ಅಗತ್ಯ. ಎರಡು, ಭಾರತದ ಸಂಸ್ಕೃತಿಯಲ್ಲಿ ಸಿಂಹದ ಸ್ಥಾನ.ದುರ್ಗೆಯ ವಾಹನದಿಂದ ರಾಷ್ಟ್ರ ಲಾಂಛನದವರೆಗೆ, ನರಸಿಂಹನಿಂದ ಗಿರ್‌ನ ಕಾಡಿನ ರಾಜನವರೆಗೆ – ಸಿಂಹವು ನಮ್ಮ ಆತ್ಮದ ಭಾಗ. 674 ಸಿಂಹಗಳನ್ನು ಉಳಿಸಿರುವುದು ನಮ್ಮ ಸಂಸ್ಕೃತಿಯ ಒಂದು ಭಾಗವನ್ನು ಉಳಿಸಿದಂತಿದೆ.

ವಿಶ್ವ ಸಿಂಹ ದಿನ ಸಮರ್ಪಣ ಟ್ರಸ್ಟ್ ಆಚರಿಸಿ ಪ್ರತಿಜ್ಞೆ ಮಾಡಲೋರಟಿದೆ ಮುಂದಿನ ಪೀಳಿಗೆಗೂ ಗಿರ್‌ನಲ್ಲಿ ಸಿಂಹದ ಘರ್ಜನೆ ಕೇಳಿಸಬೇಕು. ಏಕೆಂದರೆ ಕಾಡಿನ ರಾಜನನ್ನು ಉಳಿಸುವುದು ಎಂದರೆ ನಮ್ಮ ಭಾರತೀಯ ಪರಂಪರೆಯನ್ನು ಉಳಿಸುವುದಾಗಿದೆ. ಜಲವೇ ಜೀವ, ವನವೇ ಜೀವ, ಸಿಂಹವೇ ಸಂಸ್ಕೃತಿ.ಎಂಬುದು ನಮ್ಮ ಧ್ಯೆಯವಾಗಬೇಕು ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others