ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ಜಾಮೀನು ಅರ್ಜಿಯಲ್ಲಿದ್ದ ಪ್ರಮುಖ ಪ್ರಯಾಣ ಷರತ್ತನ್ನು ಸಡಿಲಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಈ ಹಿಂದೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ಬಿ. ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, “ನ್ಯಾಯಾಲಯದ ಪೂರ್ವ ಲಿಖಿತ ಅನುಮತಿಯಿಲ್ಲದೆ ಕರ್ನಾಟಕ ರಾಜ್ಯವನ್ನು ಬಿಟ್ಟು ಹೊರಗೆ ತೆರಳಬಾರದು” ಎಂಬ ಕಟ್ಟುನಿಟ್ಟಿನ ನಿಯಮವನ್ನು ವಿಧಿಸಲಾಗಿತ್ತು. ಆದರೆ, ಈಗ ಹೈಕೋರ್ಟ್ ಈ ಷರತ್ತಿಗೆ ತಡೆ ನೀಡಿದ್ದು, ರಾಜ್ಯದಿಂದ ಹೊರಗೆ ಪ್ರಯಾಣಿಸಲು ಹಾದಿ ಸುಗಮಗೊಳಿಸಿದೆ.
ಷರತ್ತು ಮಾರ್ಪಡು – ದೇಶ ಬಿಡುವಂತಿಲ್ಲ: ವಿಶೇಷ ಕೋರ್ಟ್ ವಿಧಿಸಿದ್ದ ‘ರಾಜ್ಯ ಬಿಟ್ಟು ತೆರಳಬಾರದು’ ಎಂಬ ನಿಯಮವನ್ನು ಮಾರ್ಪಡಿಸಿರುವ ಹೈಕೋರ್ಟ್, “ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯುವಂತಿಲ್ಲ” ಎಂಬ ಹೊಸ ಆದೇಶ ನೀಡಿದೆ. ಇದರೊಂದಿಗೆ ನಾಗೇಂದ್ರ ಅವರು ರಾಜ್ಯದ ಹೊರಗೆ ಪ್ರಯಾಣಿಸಲು ಕೋರ್ಟ್‌ನಿಂದ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿಲ್ಲದಂತಾಗಿದೆ. ಇನ್ನು ಈ ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಆಗಸ್ಟ್ 12ರವರೆಗೆ ಕಾಲಾವಕಾಶ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ಕಾನೂನುಬಾಹಿರವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿತ್ತು. ಹಗರಣದ ಕಾವು ಏರುತ್ತಿದ್ದಂತೆ ಅಂದಿನ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು.
ವಿಚಾರಣೆ ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದ್ದರೂ, ರಾಜ್ಯದ ಹೊರಗೆ ತೆರಳಲು ನಿರ್ಬಂಧ ಹೇರಿತ್ತು. ಪ್ರಸ್ತುತ ಉನ್ನತ ನ್ಯಾಯಾಲಯ ನೀಡಿರುವ ಈ ವಿನಾಯಿತಿಯಿಂದಾಗಿ ಮಾಜಿ ಸಚಿವರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.





