Nikhil Kumaraswamy-ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ಹೊಟ್ಟೆಕಿಚ್ಚಿಲ್ಲ ಆದರೆ, ನಿಮ್ಮ ಅಧಿಕಾರ ಜನಪರವಾಗಿದೆಯೇ? ಸಿಎಂ ವಿರುದ್ಧ ನಿಖಿಲ್ ಗರಂ

ರಾಮನಗರ: ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೇನೂ ಹೊಟ್ಟೆಕಿಚ್ಚಿಲ್ಲ. ಆದರೆ, ನಿಮ್ಮ ಅಧಿಕಾರ ಜನಪರವಾಗಿದೆಯೇ? ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ, ಪಾದಯಾತ್ರೆ ಮಾಡುತ್ತಿದ್ದಾರೆ ಈ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಹಿಂದೆ ರೈತರಿಂದ ಪೆನ್ನು, ಪೇಪರ್ ಕೇಳಿದ್ದ ಡಿ.ಕೆ. ಶಿವಕುಮಾರ್ ಅವರೇ, ಈಗ ನೀವೇ ಸಿಎಂ ಅಧಿಕಾರದಲ್ಲಿದ್ದೀರಿ. ಆ ಪೆನ್ನು ಮತ್ತು ಪೇಪರ್ ಅನ್ನು ಯಾರ ಉದ್ದಾರಕ್ಕಾಗಿ ಬಳಸುತ್ತಿದ್ದೀರಿ? 33 ಸಾವಿರ ಕೋಟಿ ರೂಪಾಯಿ ಹಣ ಮಾಡಲು ಪೆನ್ನು, ಪೇಪರ್ ಬಳಸುತ್ತಿದ್ದೀರಾ? ಎಂದು ಕೇಳಿದ್ದಾರೆ.

ಕನಕಪುರದಲ್ಲಿ ರೈತರಿಗೆ ಜಮೀನು ಮಾರಬೇಡಿ ಎಂದು ಬುದ್ಧಿವಾದ ಹೇಳುವ ನೀವೇ, ಇಲ್ಲಿ ರೈತರ ಜಮೀನನ್ನು ಕಬಳಿಸಲು ಮುಂದಾಗಿದ್ದೀರಿ. ಹಿಂದೆ ಎಕರೆಗೆ 2 ಕೋಟಿ ರೂ. ಕೊಡುವುದಾಗಿ ಹೇಳಿದ್ದೀರಿ ಈಗ ದಿಢೀರನೆ 3 ಕೋಟಿ ರೂ. ಕೊಡುವುದಾಗಿ ಏಕೆ ಘೋಷಿಸಿದ್ರಿ? ಯೋಜನೆ ಜಾರಿಗೆ ನಿಮ್ಮ ಬಳಿ ಹಣವಿದೆಯೇ? ಇದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ.

ಫ್ರೀಡಂ ಪಾರ್ಕ್‌ವರೆಗೆ ತಲುಪಬೇಕಾದ ನಮ್ಮ ಪಾದಯಾತ್ರೆಯನ್ನು ತಡೆಯಲು ಪೊಲೀಸರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದ್ದು, ಈ ಹಿಂದೆ ನೀವೇ ಸ್ವತಃ ಮೇಕೆದಾಟು ಯೋಜನೆಗಾಗಿ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡಿದ್ದಾಗ ಅದು ಕಾನೂನುಬಾಹಿರವಾಗಿರಲಿಲ್ಲವೇ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಮತ್ತು ಹೋರಾಟಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರ ಬೆದರಿ ಈ ರೀತಿಯ ಹತಾರಗಳನ್ನು ಬಳಸುತ್ತಿದೆ .
ದೇವೇಗೌಡರ ಕೈಕಾಲುಗಳಿಗೆ ವಯಸ್ಸಾಗಿರಬಹುದು, ಆದರೆ, ಅವರ ಮನೋಶಕ್ತಿ ಮತ್ತು ಹೋರಾಟದ ಕಿಚ್ಚಿಗೆ ವಯಸ್ಸಾಗಿಲ್ಲ. ನಮ್ಮ ಪಾದಯಾತ್ರೆಗೆ ಸರ್ಕಾರ ಸಂಪೂರ್ಣವಾಗಿ ಹೆದರಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡುತ್ತಿದೆ ಎಂದರು.

ಒಕ್ಕಲಿಗರು ಸಿಎಂ ಆದರೆ ನಮ್ಮ ಕುಟುಂಬ ಸಹಿಸಲ್ಲ ಎಂದು ಹೇಳುತ್ತೀರಿ. ಆದರೆ, ದೇವೇಗೌಡರು ನಿಮಗೂ ಒಳ್ಳೆಯ ಕೆಲಸ ಮಾಡಿ ಎಂದು ಹಾರೈಸಿದ್ದಾರೆ. ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೇನೂ ಹೊಟ್ಟೆಕಿಚ್ಚಿಲ್ಲ. ಆದರೆ, ನಿಮ್ಮ ಅಧಿಕಾರ ಜನಪರವಾಗಿದೆಯೇ ಎಂದಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others