ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಭಾಗಿಯಾಗಿರುವ ಬಹುಚರ್ಚಿತ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಪ್ರಕರಣದ 14ನೇ ಆರೋಪಿಯಾಗಿರುವ (A-14) ಪ್ರದೋಷ್‌ನನ್ನು ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸಲು ಬೆಂಗಳೂರಿನ 59ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯ ಅಧಿಕೃತ ಅನುಮತಿ ನೀಡಿದೆ.
ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ಇತರ ಯಾವುದೇ ಆರೋಪಿಗಳು ಆಕ್ಷೇಪ ಎತ್ತುವಂತಿಲ್ಲ” ಎಂದು ಸ್ಪಷ್ಟಪಡಿಸಿ ಆದೇಶ ಹೊರಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು ಪ್ರಾಸಿಕ್ಯೂಷನ್ ವಕೀಲರು ಬೆಂಬಲಿಸಿದ್ದರು. ಆದರೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಈ ಅರ್ಜಿಯನ್ನು ಸ್ವೀಕರಿಸಬಾರದು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ದರ್ಶನ್ ಅವರ ವಕೀಲರ ವಾದವನ್ನು ತಳ್ಳಿಹಾಕಿರುವ ಕೋರ್ಟ್, ಪ್ರದೋಷ್ ಅರ್ಜಿಯನ್ನು ಪುರಸ್ಕರಿಸಿದ್ದು ದರ್ಶನ್ ಹಾಗೂ ಇತರ ಆರೋಪಿಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.
ನ್ಯಾಯಾಲಯವು ಈ ಅರ್ಜಿಯನ್ನು ಸ್ವೀಕರಿಸಿ ಮುಂದಿನ ಕಾನೂನು ಪ್ರಕ್ರಿಯೆಗೆ ಹಾದಿ ಸುಗಮಗೊಳಿಸಿರುವುದರಿಂದ, ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಭಾರೀ ತಿರುವು ಸಿಗುವ ಸಾಧ್ಯತೆಯಿದೆ. ಇದು ನ್ಯಾಯಾಲಯದಲ್ಲಿ ದರ್ಶನ್ ಪರ ವಾದದ ಮೇಲೆಯೂ ನೇರ ಹಾಗೂ ಪ್ರಬಲ ಪರಿಣಾಮ ಬೀರಲಿದೆ.
ಯಾರೀ ಪ್ರದೋಷ್? ಕೃತ್ಯದಲ್ಲಿ ಈತನ ಪಾತ್ರವೇನು? ಬೆಂಗಳೂರಿನ ಗಿರಿನಗರದಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಪ್ರದೋಷ್, ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್. ಐಟಿ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದರೂ ಆತನಿಗೆ ನಟನೆಯಲ್ಲಿ ಅಪಾರ ಆಸಕ್ತಿಯಿತ್ತು. ಸಿನಿಮಾದಲ್ಲಿ ಅಭಿನಯಿಸುವ ಈ ವ್ಯಾಮೋಹವೇ ಆತನನ್ನು ನಟ ದರ್ಶನ್ ಆಪ್ತ ಬಳಗಕ್ಕೆ ತಂದು ಸೇರಿಸಿ, ದರ್ಶನ್ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಿತ್ತು. ದರ್ಶನ್ ನಟನೆಯ ‘ಬೃಂದಾವನ’ ಹಾಗೂ ‘ಬುಲ್‌ಬುಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಈತ ಸಣ್ಣಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಪ್ರಮುಖ ಪಾತ್ರ ವಹಿಸಿದ್ದು, ಕೃತ್ಯ ನಡೆದ ನಂತರ ದರ್ಶನ್ ಅವರನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಲು ತೀವ್ರ ಯತ್ನ ನಡೆಸಿದ್ದ ಎಂಬ ಆರೋಪವಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಎಲ್ಲೂ ಬಾರದಂತೆ ನೋಡಿಕೊಳ್ಳಲು ಹಾಗೂ ಸಾಕ್ಷಿ ನಾಶಪಡಿಸಲು ದರ್ಶನ್, ಪ್ರದೋಷ್‌ಗೆ 30 ಲಕ್ಷ ರೂಪಾಯಿ ನಗದು ನೀಡಿದ್ದರು. ತನಿಖೆಯ ವೇಳೆ ಪೊಲೀಸರು ಪ್ರದೋಷ್ ನಿವಾಸದ ಮೇಲೆ ದಾಳಿ ನಡೆಸಿ ಈ 30 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದ್ದು, ಈ ಕುರಿತು ನ್ಯಾಯಾಲಯಕ್ಕೆ ಅಧಿಕೃತ ಪುರಾವೆಗಳನ್ನು ಸಲ್ಲಿಸಿದ್ದಾರೆ.
ಈಗ ಸ್ವತಃ ಪ್ರದೋಷ್ ಕೋರ್ಟ್ ಮುಂದೆ ಸತ್ಯ ಬಿಚ್ಚಿಟ್ಟು ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ಪ್ರಕರಣದ ತನಿಖೆಯಲ್ಲಿ ಅತ್ಯಂತ ನಿರ್ಣಾಯಕ ಘಟ್ಟವಾಗಲಿದೆ.





