ಬೆಂಗಳೂರು: ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರಿಗೆ ಸೂಚಿನೆ ನೀಡಲಾಗಿದೆ.
ರಾಜ್ಯದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಹಾಗೂ ಇತರೆ ಆಹಾರ ಸೇವಾ ಸಂಸ್ಥೆಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ರಾಜ್ಯದ ವಿವಿಧೆಡೆ ನಡೆದ ತಪಾಸಣೆ ಹಾಗೂ ಜಾರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ, ಕಳಪೆ ನೈರ್ಮಲ್ಯ, ಅಸುರಕ್ಷಿತ ಆಹಾರ ಸಂಗ್ರಹಣೆ ಹಾಗೂ ಆಹಾರ ಕಲುಷಿತಗೊಳ್ಳುವ ಸಾಧ್ಯತೆ ಇರುವ ಪರಿಸ್ಥಿತಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಹೊಸದಾಗಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರೆಡಿಯಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಗಳ ಅನ್ವಯ ಹೋಟೆಲ್, ಧಾಬಾ, ರೆಸ್ಟೋರೆಂಟ್ ಮತ್ತು ಇತರೆ ಆಹಾರ ಸೇವಾ ಸಂಸ್ಥೆಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಅಧಿಕೃತ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ.
ಹೋಟೆಲ್ ರೇಡ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆಗೆ ಆರೋಗ್ಯ ಸಚಿವ ಯುಟಿ ಖಾದರ್ ಅವರು ಸೂಚನೆ ನೀಡಿದ್ದಾರೆ.
ಆರೋಗ್ಯ ಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಿ ಹಾಸ್ಟೆಲ್‌ಗಳು, ಖಾಸಗಿ ಹಾಸ್ಟೆಲ್‌ಗಳು ಮತ್ತು ಸಹಕಾರಿ ಹಾಸ್ಟೆಲ್‌ಗಳಲ್ಲಿನ ಆಹಾರ ತಪಾಸಣೆ ಮಾಡಲಾಗುವುದು. ಈ ವೇಳೆ ಆಹಾರ ಗುಣಮಟ್ಟ, ಸ್ವಚ್ಛತೆ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ
ಯಾವುದೇ ಕಾರಣಕ್ಕೂ ತಪಾಸಣೆ ಮಾಡದೇ ಇರಲ್ಲ. ಬರುವಂತಹ ಜನರಿಗೆ ಗುಣಮಟ್ಟದ ಆಹಾರ ಕೊಡಬೇಕು. ಕೊಟ್ಟ ದುಡ್ಡಿಗೆ ಜನರಿಗೆ ಮೋಸ ಮಾಡಬಾರದು. ನಿಯಮ ಉಲ್ಲಂಘನೆಗೆ ತಕ್ಕಂತೆ ಕ್ರಮ ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.
ಪಿಜಿಗಳಲ್ಲಿಯೂ ಕೂಡ ಟೆಸ್ಟ್ ಮಾಡಿಸುತ್ತೇವೆ. ಎಲ್ಲಾ ಕಡೆಯ ಹಾಸ್ಟೆಲ್, ಪಿಜಿಯಲ್ಲಿ ಫುಡ್ ಟೆಸ್ಟ್ ಮಾಡಿಸುತ್ತೇವೆ. ಇದರ ಜೊತೆಗೆ ಕ್ಯಾಂಟಿರಿಂಗ್‌ಗಳಲ್ಲಿಯೂ ಟೆಸ್ಟ್ ಮಾಡಿಸುತ್ತೇವೆ. ಬೆಂಗಳೂರು ಕೇಂದ್ರದಲ್ಲಿ ದಾಳಿ ಆಗ್ತಿದೆ. ಜಿಲ್ಲಾ ಕೇಂದ್ರದಲ್ಲಿಯೂ ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.





