ಕಷ್ಟ ಎಲ್ಲರ ಜೀವನದಲ್ಲಿ ವಾಸ್ತವ ಪರಿಚಯಿಸುವ ಒಂದೊಳ್ಳೆಯ ಅನುಭವವಾಗಿದ್ದು, ಸಂತಸದಲ್ಲಿರುವಾಗ ಎಲ್ಲರೂ ನಮ್ಮತ್ತ ಇಣುಕಿ ನೋಡುತ್ತಾರೆ ಆದರೆ ದುಖಃದಲ್ಲಿ ಇದ್ದಾಗ, ಅಯ್ಯೋ ಇವರ ಗೋಳು ಇದ್ದದ್ದೇ ಎಂದು ನೋವಿಗೆ ಮತ್ತಷ್ಟು ಬರೆ ಎಳೆಯುತ್ತಾರೆ. ಹೀಗಿರುವಾಗ ನಾವು ಸಂಕಟಗಳನ್ನು ಹೀಯಾಳಿಸುತ್ತೇವೆ ಆದ್ರೆ ಆ ನೋವುಗಳೇ ನಮ್ಮವರು ಯಾರು ಎಂದು ಪರಿಚಯಿಸುತ್ತವೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇರುತ್ತದೆ.
ದಿನ ಬೆಳಗ್ಗೆ ಆದರೆ ಸಾಕು ಇನ್ನೊಬ್ಬರನ್ನು ಶಪಿಸುತ್ತಲೇ ಕಾಲ ಕಳೆಯುತ್ತಿದ್ದು ಪರರಿಗೆ ಕೆಟ್ಟದನ್ನು ಬಯಸುವುದರಲ್ಲಿ ಪಿಎಚ್ಡಿಯನ್ನು ಪಡೆದಿರುತ್ತೇವೆ. ಒಳ್ಳೆಯತನ ಎನ್ನುವುದು ಪ್ರಸ್ತುತ ಕಳೆದು ಹೋಗಿದೆ. ನಾವಷ್ಟೇ ಚೆನ್ನಾಗಿರಬೇಕು ಬೇರೆಯವರು ನಮ್ಮ ಮುಂದೆ ಸ್ಪಲ್ಪ ಮುಂದುವರೆದರೆ ಸಾಕು ಏ ಅವರು ಅಡ್ಡ ದಾರಿಯಲ್ಲಿ ಇದ್ದಾರೆ ಎಂದು ಅವರ ಬಗ್ಗೆ ಅಪಪ್ರಚಾರ ಮಾಡುತ್ತೇವೆ.
ಇಂತಹ ನೀಚ ಮನಸ್ಥಿತಿ ಹೊಂದಿರುವ ಮನುಷ್ಯರು ಇತ್ತೀಚೆಗೆ ಜಾಸ್ತಿಯಾಗುತ್ತಾ ಇದ್ದಾರೆ. ನಮ್ಮ ಸುತ್ತ-ಮುತ್ತ ಸಾಕಷ್ಟು ಸ್ಟೋರಿಗಳನ್ನು ನೋಡುತ್ತಲೇ ಇರುತ್ತೇವೆ. ಯೌವನದಲ್ಲಿ ಯುವತಿಯರು,ಮಹಿಳೆಯರು ಸಣ್ಣ ತಪ್ಪು ಮಾಡಿದ್ರೆ ಸಾಕು ಅವರಿಗೆ ಇಲ್ಲ ಸಲ್ಲದ ಪಟ್ಟಗಳನ್ನು ಕಟ್ಟಿ ಬೀಡುತ್ತಾರೆ. ಇನ್ನು ಯಾರೋ ಒಬ್ಬರು ಅವರ ದುಡ್ಡಲ್ಲಿ ಅವರು ಮೆರೆಯುತ್ತಾ ಇದ್ರೆ ಅದಕ್ಕೂ ಸಹ ಸೊಕ್ಕು ಜಾಸ್ತಿ ನೋಡು ಇವನಿಗೆ ಎಂದು ಹೇಳುತ್ತೇವೆ.
ಒಟ್ಟಿನಲ್ಲಿ ಮನುಷ್ಯನ ಮನಸ್ಸು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಯಾವಾಗಲೂ ಮತ್ತೊಬ್ಬರ ಕಾಲು ಎಳೆಯುವುದಕ್ಕೆ ಕಾತುರದಿಂದ ಕಾಯುತ್ತಾ ಇರುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಏ ನೋಡು ಅವರಿಗೆ ಗಾಂಚಾಲಿ ಜಾಸ್ತಿ ಇತ್ತು ,ಈಗ ನೋಡು ಸಮಸ್ಯೆಗಳ ಮೇಲೆ ಸಮಸ್ಯೆ ಬರುತ್ತಿದೆ ಎಂದು ಮಾತನಾಡಿಕೊಳ್ಳುವುದು, ನಗಾಡುವುದು ಮಾಡಿದ್ರೆ ಆ ಸಮಸ್ಯೆಗಳು ಮರುದಿನವೆ ಆಡಿಕೊಳ್ಳುವುವವರಲ್ಲಿ ಆರಂಭವಾಗಿರುತ್ತವೆ. ಆಗ ಅವರು ಅಂದುಕೊಳ್ಳುತ್ತಾರೆ ನಾವು ಯಾರಿಗೂ ಏನು ಕೆಟ್ಟದ್ದು ಮಾಡಿಲ್ಲ ನಮಗೆ ಯಾಕೆ ಕಷ್ಟ ಎಂದು. ನೀವು ಕೆಟ್ಟದ್ದು ಮಾಡಿಲ್ಲ ನಿಜ ಆದ್ರೆ ಒಬ್ಬರ ಕಷ್ಟಗಳನ್ನು ಕಂಡು ಕೇಕೆ ಹೊಡಿಯುತ್ತೀರಿ ಇದಕ್ಕಿಂತ ಕೆಟ್ಟದ್ದು ಮತ್ತೇ ಯಾವುದೂ ಇಲ್ಲ. ಯೋಚನೆ ಮಾಡಿ, ಕಷ್ಟದಲ್ಲಿರುವವರ ಕಣ್ಣೀರು ವರೆಸುವುದಕ್ಕೆ ಪ್ರಯತ್ನಿಸಿ.
ಮತ್ತು ನೀವು ಯಾರನ್ನಾದರೂ ಅವರ ತಪ್ಪುಗಳಿಗಾಗಿ ನಿರ್ಣಯಿಸುವಾಗ ಜಾಗರೂಕರಾಗಿರಬೇಕು, ನೀವು ಅವರ ಇಂದಿನ ಪರಿಸ್ಥಿತಿಯನ್ನು ನೋಡಿ, “ನಾನು ಎಂದಿಗೂ ಹಾಗೆ ಮಾಡುವುದಿಲ್ಲ” ಎಂದು ಭಾವಿಸಬಹುದು. ಆದರೆ ಜೀವನವು ನಮ್ಮನ್ನು ಯಾವಾಗ ಯಾವ ರೀತಿಯಲ್ಲಿ ಬದಲಾಯಿಸುತ್ತದೆ ಎನ್ನುವುದು ತಿಳಿದಿಲ್ಲ.
ಕೆಲವೊಮ್ಮೆ, ದೇವರು ನಮಗೆ ಬೇರೆಯವರನ್ನು ನಿರ್ಣಯಿಸಿದ ರೀತಿಯ ಪರೀಕ್ಷೆಯನ್ನು ಎದುರಿಸಲು ಅವಕಾಶ ನೀಡುತ್ತಾನೆ – ನಮ್ಮನ್ನು ಶಿಕ್ಷಿಸಲು ಅಲ್ಲ, ಆದರೆ ನಮಗೆ ಕರುಣೆ, ನಮ್ರತೆ ಮತ್ತು ತಿಳುವಳಿಕೆಯನ್ನು ಕಲಿಸಲು ಆತನು ರೆಡಿ ಇರುತ್ತಾನೆ. ನಾವು ಇದನ್ನೇ ಬೇರೆಯ ರೀತಿಯಲ್ಲಿ ತೆಗೆದುಕೊಂಡು ಹೋಗಬಾರದು
ಯಾರಾದರೂ ನೋವು ಅನುಭವಿಸುತ್ತಿದ್ದರೆ ಅವರು ಏನನ್ನು ಅನುಭವಿಸಿದ್ದಾರೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ, ಸಂಕಟದಲ್ಲಿರುವವರ ಮುಚ್ಚಿದ ಬಾಗಿಲುಗಳ ಹಿಂದೆ ಅವರು ಯಾವ ಯುದ್ಧವನ್ನು ಎದುರಿಸುತ್ತಿದ್ದಾರೆಂದು ನಮಗೆ ಎಂದಿಗೂ ತಿಳಿದಿರುವುದಿಲ್ಲ. ಆದ್ದರಿಂದ ಅವರ ಬಗ್ಗೆ ನಿರ್ಣಯಿಸುವ ಮೊದಲು, ಅವರನ್ನು ಅಪ್ಪಿಕೊಳ್ಳಿ ಕೃಪೆ ತೋರಿಸಿ. ಕರುಣೆ ತೋರಿಸಿ. ವಿನಮ್ರರಾಗಿರಿ. ಏಕೆಂದರೆ ನಾವು ಒಂದು ದಿನ ಯಾವ ಪರಿಸ್ಥಿಯಲ್ಲಿ ಇರುತ್ತೇವೆ ಎಂದು ನಮಗೂ ತಿಳಿದಿರುವುದಿಲ್ಲ.. ನಾವು ಸಂಕಷ್ಟಗಳಿಗೆ ಸ್ಪಂದನೆ ನೀಡುವುದನ್ನು ರೂಢಿ ಮಾಡಿಕೊಳ್ಳಬೇಕು.





