ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು : ವಿದೇಶಾಂಗ ಸಚಿವ ಎಸ್. ಜೈಶಂಕರ್

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಕಾನೂನು, ನಿಯಮಗಳು ಮತ್ತು ಮಾನದಂಡಗಳನ್ನು ಎಲ್ಲರೂ ನಿರಂತರವಾಗಿ ಪಾಲಿಸಿದಾಗ ಮಾತ್ರ ಬಹುಪಕ್ಷೀಯ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ನಡೆದ ‘ಪಾರ್ಟ್ನರ್ಸ್ ಫಾರ್ ಮಲ್ಟಿಲ್ಯಾಟರಲಿಸಂ, ಇಂಟರ್‌ನ್ಯಾಷನಲ್ ಲಾ, ಪೀಸ್ & ಪ್ರಾಸ್ಪೆರಿಟಿ’ ಶೃಂಗಸಭೆಯ ಉದ್ಘಾಟನಾ ಸಭೆಗೆ ಜೈಶಂಕರ್ ಸಹ-ಅಧ್ಯಕ್ಷತೆ ವಹಿಸಿದ್ದರು.

ಜಾಗತಿಕ ವ್ಯವಸ್ಥೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಹುಪಕ್ಷೀಯ ವ್ಯವಸ್ಥೆ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು ಹಾಗೂ ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕಾನೂನು, ನಿಯಮಗಳು ಮತ್ತು ಮಾನದಂಡಗಳನ್ನು ಎಲ್ಲರೂ ನಿರಂತರವಾಗಿ ಪಾಲಿಸಿದಾಗ ಮಾತ್ರ ಬಹುಪಕ್ಷೀಯ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ. ಶಾಂತಿ ಮತ್ತು ಅಂತಾರಾಷ್ಟ್ರೀಯ ಭದ್ರತೆ, ಹವಾಮಾನ ಕ್ರಮಗಳು, ಹೊಸ ತಂತ್ರಜ್ಞಾನಗಳು, ಅಭಿವೃದ್ಧಿ ಹಣಕಾಸು, ಭಯೋತ್ಪಾದನೆ ನಿಗ್ರಹ, ಪೂರೈಕೆ ಸರಪಳಿ, ವಿಪತ್ತು ನಿರ್ವಹಣೆ ಮತ್ತು ಸಾಂಕ್ರಾಮಿಕ ರೋಗಗಳ ಸಿದ್ಧತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರ ಅಗತ್ಯವಿದೆ ಎಂದು ಜೈಶಂಕರ್ ಹೇಳಿದರು.

ಕಳೆದ ಹಲವು ದಶಕಗಳಲ್ಲಿ ಜಾಗತಿಕ ಶಕ್ತಿಸಮತೋಲನದಲ್ಲಿ ನಿರಂತರ ಬದಲಾವಣೆ ಕಂಡುಬಂದಿದೆ. ಆದರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸಂಘರ್ಷಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ ಎಂದು ಜೈಶಂಕರ್ ಹೇಳಿದರು.

“ಇದನ್ನು ನಿಯಂತ್ರಿಸದೆ ಬಿಟ್ಟರೆ, ಅಂತಾರಾಷ್ಟ್ರೀಯ ಸಹಕಾರದ ಮೂಲ ಆಶಯವೇ ಪ್ರಶ್ನಾರ್ಹವಾಗಬಹುದು. ಹೀಗಾಗಿ ಸುಧಾರಿತ ಬಹುಪಕ್ಷೀಯ ವ್ಯವಸ್ಥೆ ಅತ್ಯಗತ್ಯ” ಎಂದು ಅವರು ಹೇಳಿದರು.

ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಅವಕಾಶ ಮತ್ತು ಹೆಚ್ಚಿನ ಪಾರದರ್ಶಕತೆ ಬಹಳ ಹಿಂದೆಯೇ ಅಗತ್ಯವಾಗಿತ್ತು ಎಂದು ಜೈಶಂಕರ್ ಪ್ರತಿಪಾದಿಸಿದರು. ಸಂಘರ್ಷಗಳು ಮತ್ತು ಜಾಗತಿಕ ಅಡೆತಡೆಗಳಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆಯೂ ಅವರು ಗಮನ ಸೆಳೆದರು. ಇಂಧನ, ಆಹಾರ, ರಸಗೊಬ್ಬರ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ‘4F’ ಬಿಕ್ಕಟ್ಟನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.

ಹೊಸ ತಂತ್ರಜ್ಞಾನಗಳಿಂದ ಎದುರಾಗಬಹುದಾದ ಅಪಾಯಗಳನ್ನು ನಿರ್ವಹಿಸಲು ಸೂಕ್ತ ಚೌಕಟ್ಟು ಮತ್ತು ಸುರಕ್ಷತಾ ಕ್ರಮಗಳನ್ನು ರೂಪಿಸಬೇಕು. ಪೂರೈಕೆ ಸರಪಳಿಗಳಲ್ಲಿ ಸಂಭವಿಸಬಹುದಾದ ಪ್ರಮುಖ ಅಡಚಣೆಗಳನ್ನು ಎದುರಿಸಲು ಅವುಗಳನ್ನು ವಿವಿಧ ಮೂಲಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಈ ವೇಳೆ ಭಾರತದ ಪರವಾಗಿ ಮಾತನಾಡಿದ ಅವರು, ಜಾಗತಿಕ ನಿರ್ಧಾರ ಪ್ರಕ್ರಿಯೆಯನ್ನು ಹೆಚ್ಚು ಪಾಲ್ಗೊಳ್ಳುವಂತೆಯೂ ಪಾರದರ್ಶಕವಾಗಿಯೂ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಆಸ್ಟ್ರೇಲಿಯಾ, ಬಾರ್ಬಡೋಸ್, ಬ್ರೆಜಿಲ್, ಕೆನಡಾ, ಕೀನ್ಯಾ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಈ ಶೃಂಗಸಭೆಯ ಸಹ-ಪ್ರಾಯೋಜಕ ರಾಷ್ಟ್ರವಾಗಿತ್ತು. ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಅಧಿವೇಶನದ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.

“ಜಾಗತಿಕ ವ್ಯವಸ್ಥೆ ಒತ್ತಡದಲ್ಲಿರುವ ಸಂದರ್ಭದಲ್ಲಿ ನಾವು ಇಲ್ಲಿ ಸೇರಿದ್ದೇವೆ” ಎಂದು ಜೈಶಂಕರ್ ಹೇಳಿದರು. ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಸ್ಪರ್ಧೆ ಮತ್ತು ಸಂಘರ್ಷಗಳ ನಡುವೆ ಬಹುಪಕ್ಷೀಯ ವ್ಯವಸ್ಥೆ ತನ್ನ ಪ್ರಸ್ತುತತೆಯನ್ನು ಬಲವಾಗಿ ಪ್ರತಿಪಾದಿಸಬೇಕಿದೆ ಎಂದು ಅವರು ತಿಳಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post