ವಾಷಿಂಗ್ಟನ್: ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ.ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿದೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಾವಧಿ ಚುನಾವಣೆಗೂ ಮುನ್ನವೇ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ. ಆದರೆ ಅದರಿಂದ ಕಾರ್ಯಾಚರಣೆ ನಿಂತಿದೆ ಎಂದರ್ಥವಲ್ಲ. ಅಮೆರಿಕದ ಒತ್ತಡದಿಂದ ಇರಾನ್ ಆರ್ಥಿಕತೆ ತೀವ್ರವಾಗಿ ಹಾನಿಗೊಳಗಾಗಿದೆ. ಇರಾನ್‌ನಲ್ಲಿ ಹಣದುಬ್ಬರ ಏರಿಕೆಯಾಗಿದ್ದು, ದೇಶದ ಕರೆನ್ಸಿ ಮೌಲ್ಯ ಕುಸಿದಿದೆ.
“ವರ ಹಣದ ಮೌಲ್ಯವೇ ಇಲ್ಲದಂತಾಗಿದೆ. ನಮ್ಮಲ್ಲೂ ಹಣದುಬ್ಬರವಿದೆ. ಆದರೆ ಅವರಲ್ಲಿ ಈಗ ಸುಮಾರು ಶೇ.300ರಷ್ಟು ಹಣದುಬ್ಬರವಿದೆ. ಇಂದು ಬೆಳಗ್ಗೆ ಶೇ.318 ಎಂದು ಕೇಳಿದ್ದೇನೆ. ಅವರ ಹಣ, ಆರ್ಥಿಕತೆ ಮತ್ತು ಸೇನಾ ಸಾಮರ್ಥ್ಯ ಎಲ್ಲವೂ ಸಂಕಷ್ಟದಲ್ಲಿವೆ ಎಂದು ಹೇಳಿದ್ದಾರೆ.
ಇದೇ ವೇಳೆ, ಅಮೆರಿಕದೊಂದಿಗೆ ದೀರ್ಘಕಾಲದ ಸಂಘರ್ಷಕ್ಕೂ ಇರಾನ್ ಸಿದ್ಧವಿದೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಇರಾನ್ ರಾಜತಾಂತ್ರಿಕ ಮಾತುಕತೆಗೆ ಇನ್ನೂ ಮುಕ್ತವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಎನ್‌ಬಿಸಿ ನ್ಯೂಸ್‌ನ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅರಾಘ್ಚಿ, ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಇರಾನ್‌ನ ಪ್ರಸ್ತಾವವನ್ನು ಟ್ರಂಪ್ ಸಾರ್ವಜನಿಕವಾಗಿ ತಿರಸ್ಕರಿಸಿದ ಬಳಿಕವೂ ಇರಾನ್ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಯುದ್ಧ ಮತ್ತೆ ಆರಂಭವಾದರೂ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಯಾವುದೇ ಹೊಸ ಆಕ್ರಮಣ ಎದುರಾದರೂ, ಅದು ಡೂಮ್ಸ್‌ಡೇ ಯುದ್ಧದ ಮಟ್ಟಕ್ಕೆ ತಲುಪಿದರೂ ನಾವು ದೃಢವಾಗಿ ಎದುರಿಸುತ್ತೇವೆ. ಅಮೆರಿಕದ ಮಧ್ಯಂತರ ಚುನಾವಣೆಗಳ ಬಗ್ಗೆ ನಮಗೆ ಕಾಳಜಿಯಿಲ್ಲ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳೇ ನಮಗೆ ಮುಖ್ಯ ಎಂದರು.
ಇರಾನ್ ವಿರುದ್ಧದ ಯುದ್ಧವನ್ನು ಅಮೆರಿಕ ಶೀಘ್ರದಲ್ಲೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ ಎಂದು ಅವರು ಉಲ್ಲೇಖಿಸಿದ ಆರ್ಥಿಕ ನಿರ್ಬಂಧಗಳು ಮತ್ತು ಸೇನಾ ಕಾರ್ಯಾಚರಣೆಗಳ ಮೂಲಕ ಅಮೆರಿಕ ಪ್ರಗತಿ ಸಾಧಿಸುತ್ತಿದೆಯೇ ಎಂಬ ಪ್ರಶ್ನೆಗೆ, ಎರಡೂ ರೀತಿಯ ಒತ್ತಡದಲ್ಲೂ ಅಮೆರಿಕ ಯಶಸ್ವಿಯಾಗುತ್ತಿದೆ ಎಂದು ಹೇಳಿದ್ದಾರೆ. .
ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಉದ್ದೇಶವಾಗಿದೆ. ಸಂಘರ್ಷ ಅಂತ್ಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಇಳಿಯಲಿವೆ. ನಾವು ಈ ಯುದ್ಧವನ್ನು ಶೀಘ್ರದಲ್ಲೇ ಗೆಲ್ಲಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಗೆದ್ದ ತಕ್ಷಣ ತೈಲ ಬೆಲೆ ಯುದ್ಧಕ್ಕೂ ಮುನ್ನ ಇದ್ದ ಮಟ್ಟಕ್ಕಿಂತಲೂ ಬಹಳ ಕೆಳಗೆ ಇಳಿಯಲಿದೆ ಎಂದು ಹೇಳಿದ್ದಾರೆ.
ಮಧ್ಯಂತರ ಚುನಾವಣೆಗೂ ಮುನ್ನ ಅಮೆರಿಕ ಮತ್ತೆ ಇರಾನ್ ಮೇಲೆ ಸೇನಾ ದಾಳಿ ನಡೆಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಧ್ಯತೆಯನ್ನು ತಳ್ಳಿಹಾಕಲು ನಿರಾಕರಿಸಿದರು.
ನಾನು ಅದನ್ನು ಹೇಳಲು ಬಯಸುವುದಿಲ್ಲ. ಆದರೆ, ಅದು ಸಾಧ್ಯ. ನಾನು ಅದರ ಬಗ್ಗೆ ಹೇಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಮುಖ್ಯ ವಿಷಯವೆಂದರೆ ಇರಾನ್ ಪರಮಾಣು ಅಸ್ತ್ರ ಹೊಂದುವುದಿಲ್ಲ. ಪರಮಾಣು ತಡೆ ಸಾಮರ್ಥ್ಯವೇ ಇಡೀ ವಿಚಾರದ ಪ್ರಮುಖ ಅಂಶ ಎಂದಿದದಾರೆ.





