ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನಕ್ಕೆ ಭದ್ರ ಬುನಾದಿ ಸಂದೀಪ್ ಕಿಶನ್ ಹಾಕಿದ್ದಾರೆ. ಆದರೆ ಚಿತ್ರಕಥೆ ತುಂಬಾ ಸೇಫ್ ಗೇಮ್ ಆಡಿದೆ. ಸಿಗ್ಮಾ’ ಎನ್ನುವುದು ಜನಪ್ರಿಯ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಚೊಚ್ಚಲ ಚಲನಚಿತ್ರವಾಗಿದ್ದು, ವರದಿಗಳ ಪ್ರಕಾರ, ಈ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಜನರು ಸಾಧಾರಣ ಮೌಲ್ಯಮಾಪನ ನೀಡಿದ್ದಾರೆ.
ಕಥೆ ಮತ್ತು ಚಿತ್ರಕಥೆ (Screenplay) ತುಂಬಾ ಹಳೆಯದಾಗಿದ್ದು, ಯಾವುದೇ ಹೊಸತನವಿಲ್ಲದೆ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ನಿರ್ದೇಶಕ ಜೇಸನ್ ಸಂಜಯ್ ಅವರು ಕಥೆಯಲ್ಲಿ ರಿಸ್ಕ್ ತೆಗೆದುಕೊಳ್ಳದೆ ಸಾಂಪ್ರದಾಯಿಕ ‘ಹೀಸ್ಟ್’ (ಕಳ್ಳತನದ) ಶೈಲಿಯಲ್ಲೇ ತುಂಬಾ ‘ಸೇಫ್’ ಆಗಿ ಸಿನಿಮಾ ಮಾಡಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ
ನಾಯಕ ಸುಂದೀಪ್ ಕಿಶನ್ ತಮಗೆ ನೀಡಿದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಇಂಟರ್ವಲ್ ಬ್ಲಾಕ್ (Interval Block) ಮತ್ತು ಕಾರ್ನಿವಲ್ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿವೆ. ಕೃಷ್ಣನ್ ವಸಂತ್ ಅವರ ಛಾಯಾಗ್ರಹಣ (Cinematography) ಮತ್ತು ಎಸ್. ಥಮನ್ ಅವರ ಹಿನ್ನೆಲೆ ಸಂಗೀತ (BGM) ಚಿತ್ರಕ್ಕೆ ಉತ್ತಮ ತಾಂತ್ರಿಕ ಬಲ ನೀಡಿವೆ
ಇದು ಒಂದು ಹೈ-ಸ್ಟೇಕ್ಸ್ ಹೀಸ್ಟ್ ಮತ್ತು ಅಡ್ವೆಂಚರ್ ಕಥೆಯಾಗಿದೆ. ನಾಯಕ ಗುರು (ಸುಂದೀಪ್ ಕಿಶನ್) ಆರ್ಥಿಕ ಸಂಕಷ್ಟ ಎದುರಿಸುತ್ತಿರುತ್ತಾನೆ. ಈ ನಡುವೆ ಸುಮಾರು ₹500 ಕೋಟಿ ಮೌಲ್ಯದ ಅಕ್ರಮ ಜೂಜಾಟ ಮತ್ತು ಡ್ರಗ್ಸ್ ಜಾಲದ ಲಿಂಕ್ ಹೊಂದಿರುವ ರಹಸ್ಯವಾದ ಹಳೆಯ ಕೋಣೆ ಹಾಗೂ ಪ್ರಾಚೀನ ಕೀಲಿಯೊಂದರ ಸುತ್ತ ಇಡೀ ಕಥೆ ಸಾಗುತ್ತದೆ. ನಾಯಕ ಮತ್ತು ನಾಯಕಿ ಈ ಹಣವನ್ನು ದೋಚಲು ಹೋಗಿ ಕ್ರಿಮಿನಲ್ ನೆಟ್ವರ್ಕ್ ಎದುರಿಸುವ ಸಾಹಸವೇ ಸಿನಿಮಾದ ಮುಖ್ಯ ತಿರುಳಾಗಿದೆ.
ಅಕ್ಟೋಬರ್ 2 ರಂದು ಬಿಡುಗಡೆಯಾದ ಈ ಚಿತ್ರ ಭಾರತದಲ್ಲಿ ಮೊದಲ ದಿನ ನಿವ್ವಳ ₹2.35 ಕೋಟಿ ಗಳಿಕೆ ಮಾಡುವ ಮೂಲಕ ಸಾಧಾರಣ ಆರಂಭ ಪಡೆದುಕೊಂಡಿದೆ. ತಮಿಳು ಆವೃತ್ತಿಯಲ್ಲಿ ಹೆಚ್ಚಿನ ಕಲೆಕ್ಷನ್ ಪಡೆದಿದೆ ಎನ್ನಲಾಗಿದೆ.
ಇತ್ತ ಈ ಚಿತ್ರಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ತಮ್ಮ ರಾಜಕೀಯ ಪ್ರಚಾರದ ವೇಳೆಯಲ್ಲೂ ತಂದೆಯ ಕರ್ತವ್ಯವನ್ನು ಮೆರೆದಿದ್ದಾರೆ. ಮಧುರಾಂತಕಂನಲ್ಲಿ ನಡೆದ ರೋಡ್ಶೋ ವೇಳೆ ಅಭಿಮಾನಿಯೊಬ್ಬರು ನೀಡಿದ ಮಗ ಜೇಸನ್ ಸಂಜಯ್ ಅವರ ‘ಸಿಗ್ಮಾ’ ಚಿತ್ರದ ಫೋಟೋ ಫ್ರೇಮ್ ಅನ್ನು ಎತ್ತಿಹಿಡಿದು ಬೆಂಬಲ ಸೂಚಿಸಿದ್ದಾರೆ. ಈ ಭಾವನಾತ್ಮಕ ಕ್ಷಣದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿರುವುದು ಬೆಳಕಿಗೆ ಬಂದಿದೆ.





