ಇಂದು ನಮ್ಮ ಬೆರಳ ತುದಿಯಲ್ಲಿ ಇ-ಮೇಲ್, ವಾಟ್ಸಪ್ ಇದೆ. ಆದರೆ ಎರಡುನೂರು ವರ್ಷಗಳ ಹಿಂದೆ ಒಂದು ಸಾಮ್ರಾಜ್ಯದ ಭವಿಷ್ಯವೇ ಒಂದು ಪಾರಿವಾಳದ ಕಾಲಿಗೆ ಕಟ್ಟಿದ ಸಣ್ಣ ಚೀಟಿಯ ಮೇಲೆ ನಿಂತಿತ್ತು. ಆ ಕಥೆಯ ಕೇಂದ್ರ ಶ್ರೀರಂಗಪಟ್ಟಣವಾಗಿದೆ.
ವಿಶ್ವ ಅಂಚೆ ದಿನದ ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಅಂಚೆ ಇತಿಹಾಸದ ಮರೆತುಹೋದ ಪುಟಗಳನ್ನು ತೆರೆದು ನೋಡೋಣ.
ಪಾರಿವಾಳ ಅಂಚೆ – ಶ್ರೀರಂಗಪಟ್ಟಣದ ಮೊದಲ ವೈರ್ಲೆಸ್.
ಶ್ರೀರಂಗಪಟ್ಟಣದಲ್ಲಿ ವ್ಯವಸ್ಥಿತ ಅಂಚೆ ವ್ಯವಸ್ಥೆ ಇದ್ದುದರ ಬಗ್ಗೆ ಮೊದಲ ಉಲ್ಲೇಖ ವಿಜಯನಗರ ಕಾಲದ್ದು. ಆಗ ಪ್ರತಿ ಹತ್ತು ಕಿ.ಮೀ ಗೆ ಒಬ್ಬ ‘ಹರ್ಕಾರ’ ಅಥವಾ ‘ಅಂಚೆಗಾರ’ ಇರುತ್ತಿದ್ದ. ಕೋಟೆಯ ಪಶ್ಚಿಮ ದ್ವಾರದ ಬಳಿ ಇದ್ದ ಕಲ್ಲಿನ ಮನೆಯನ್ನೇ ‘ಅಂಚೆ ಮನೆ’ ಎನ್ನುತ್ತಿದ್ದರು.
ಆದರೆ ಇದಕ್ಕೆ ವೈಜ್ಞಾನಿಕ ರೂಪ ಕೊಟ್ಟವನು ಟಿಪ್ಪು ಸುಲ್ತಾನ್. ಮೈಸೂರು ಗೆಜೆಟಿಯರ್ (ಬಿ ಎಲ್ ರೈಸ್, 1897) ಮತ್ತು ಬ್ರಿಟಿಷ್ ಲೈಬ್ರರಿಯಲ್ಲಿರುವ ಪರ್ಷಿಯನ್ ಹಸ್ತಪ್ರತಿಗಳ ಪ್ರಕಾರ, ಟಿಪ್ಪು ತನ್ನ ರಾಜಧಾನಿಯಲ್ಲಿ ‘ದಾಕ್ ಚೌಕಿ’ ವ್ಯವಸ್ಥೆಯನ್ನು ಸ್ಥಾಪಿಸಿದ. ಪ್ರತಿ ಚೌಕಿಯಲ್ಲಿ ಕುದುರೆ, ಒಂಟೆ ಮತ್ತು ತರಬೇತಿ ಪಡೆದ ಪಾರಿವಾಳಗಳು ಇರುತ್ತಿದ್ದವು.
ಯುದ್ಧದ ಸಮಯದಲ್ಲಿ ಶತ್ರುಗಳು ಕೋಟೆಯನ್ನು ಸುತ್ತುವರಿದಾಗ, ರೇಷ್ಮೆ ಬಟ್ಟೆಯ ಸಣ್ಣ ತುಂಡಿನ ಮೇಲೆ ಪರ್ಷಿಯನ್ ಭಾಷೆಯಲ್ಲಿ ಸಂದೇಶ ಬರೆದು, ತಾಮ್ರದ ಸಣ್ಣ ಕೊಳವೆಯಲ್ಲಿ ಹಾಕಿ ಪಾರಿವಾಳದ ಕಾಲಿಗೆ ಕಟ್ಟಿ ಕಳುಹಿಸಲಾಗುತ್ತಿತ್ತು. ಬೆಂಗಳೂರು ಕೋಟೆಗೆ ಕುದುರೆ ಸವಾರನಿಗೆ ಒಂದು ದಿನ ಬೇಕಾದರೆ, ಪಾರಿವಾಳಕ್ಕೆ ಒಂದು ಗಂಟೆ ಸಾಕಿತ್ತು. 1799ರ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಕೋಟೆಯೊಳಗಿಂದ ಹೊರಗಿನ ಸೇನಾಧಿಕಾರಿಗಳಿಗೆ ಪಾರಿವಾಳದ ಮೂಲಕ ಸಂದೇಶ ಹೋಗಿರುವುದು ಬ್ರಿಟಿಷ್ ದಾಖಲೆಗಳಲ್ಲಿ ಇದೆ.
ದರಿಯಾ ದೌಲತ್ ಮುಂದಿನ ಕಬೂತರ್ ಖಾನೆ – ದಾಖಲೆ ಏನು ಹೇಳುತ್ತದೆ?
ಶ್ರೀರಂಗಪಟ್ಟಣದ ದರಿಯಾ ದೌಲತ್ ಬಾಗ್ (1784) ಕೇವಲ ಬೇಸಿಗೆ ಅರಮನೆಯಲ್ಲ, ಅದು ಗುಪ್ತಚರ ಇಲಾಖೆಯ ಕೇಂದ್ರವಾಗಿತ್ತು. ಅದರ ಮುಂದೆ ಇಂದಿಗೂ ಇರುವ ಎತ್ತರದ ಗೋಪುರಗಳೇ ಇದಕ್ಕೆ ಸಾಕ್ಷಿ.
ಇತ್ತೀಚೆಗೆ ಇಸ್ರೊ ಬೆಂಬಲಿತ ಸಂಶೋಧಕರ ತಂಡ ನಡೆಸಿದ ಉಪಗ್ರಹ ಸಮೀಕ್ಷೆಯಲ್ಲಿ ಮಹತ್ವದ ಸಂಗತಿ ಬಯಲಾಗಿದೆ. ಸಂಶೋಧನಾ ವರದಿ ಹೀಗೆ ಹೇಳುತ್ತದೆ: “ನಾವು ಅರಮನೆಯ ನೆಲಮಾಳಿಗೆಯನ್ನು ಹುಡುಕುವಾಗ ಎರಡು ಕಬೂತರ್ ಖಾನೆ (dovecotes) ಗಳನ್ನು ಕಂಡೆವು, ಅವು ಲಾಲ್ ಬಾಗ್ ಅರಮನೆಯ ಪ್ರವೇಶ ದ್ವಾರವನ್ನು ಸೂಚಿಸುತ್ತವೆ. ದಕ್ಷಿಣದ್ದು ಇನ್ನೂ ನಿಂತಿದೆ, ಉತ್ತರದ್ದು ಕುಸಿದಿದೆ.”
ಬ್ರಿಟಿಷ್ ಮ್ಯೂಸಿಯಂನಲ್ಲಿರುವ 1799ರ ವರ್ಣಚಿತ್ರ “ದ ಗಾರ್ಡನ್ ಗೇಟ್,ಲಾಲ್ ಬಾಗ್,ಸೇರಿಂಗಪಟಂ” ನಲ್ಲಿ ಅರಮನೆಯ ಹೆಬ್ಬಾಗಿಲಿನ ಎರಡೂ ಬದಿಯಲ್ಲಿ ಈ ಪಾರಿವಾಳ ಗೋಪುರಗಳು ಸ್ಪಷ್ಟವಾಗಿ ಕಾಣುತ್ತವೆ. ಅರ್ಕಾಲಾಜಿ ಸರ್ವೇ ಆಫ್ ಇಂಡಿಯಾ ದಾಖಲೆಗಳ ಪ್ರಕಾರ ಅರಮನೆಯ ಒಳಗಿನ ಭಿತ್ತಿಚಿತ್ರಗಳಲ್ಲಿ ಪಾರಿವಾಳ ಹಿಡಿದ ಸೇವಕರ ಚಿತ್ರಗಳಿವೆ. ಅಂದರೆ ಇದು ಅಲಂಕಾರವಲ್ಲ, ಆಗಿನ ಕಾಲದ ಕಮ್ಯುನಿಕೇಶನ್ ಟವರ್ ಆಗಿತ್ತು.
‘ಶೋಕಿದಾರ್’ ಎಂಬ ಹೆಸರು ಇತಿಹಾಸ ದಲ್ಲಿದೆಯೇ?
ಪಾರಿವಾಳ ಸಾಕುವವರ ಬಗ್ಗೆ ಮಾತನಾಡುವಾಗ ‘ಶೋಕಿದಾರ್’ ಎಂಬ ಪದ ಕೇಳಿಬರುತ್ತದೆ. ಇದು ಅಧಿಕೃತ ಇತಿಹಾಸದ ಪದವೇ?
ಅಧಿಕೃತ ಮೊಘಲ್ ದಾಖಲೆ ‘ಐನ್-ಎ-ಅಕ್ಬರಿ’ ಯಲ್ಲಿ ಅಬುಲ್ ಫಜಲ್ ಇವರನ್ನು ‘ಕಬೂತರ್-ಬಾಜ್’ ಮತ್ತು ‘ಇಷ್ಕ್-ಬಾಜ್’ ಎಂದು ಕರೆದಿದ್ದಾನೆ. ಅಕ್ಬರನೇ ಪಾರಿವಾಳ ಸಾಕುವುದನ್ನು ‘ಇಷ್ಕ್-ಬಾಜಿ’ ಅಂದರೆ ಪ್ರೇಮದ ಆಟ ಎಂದಿದ್ದಾನೆ. ಗುರುಗಳಿಗೆ ‘ಉಸ್ತಾದ್’ ಮತ್ತು ‘ಖಲೀಫಾ’ ಎಂದು ಕರೆಯುತ್ತಿದ್ದರು. ಈ ಹೆಸರುಗಳು ಇಂದಿಗೂ ದೆಹಲಿಯ ಹಳೆ ನಗರದಲ್ಲಿ ಜೀವಂತವಾಗಿವೆ.
‘ಶೋಕಿದಾರ್’ ಎಂಬುದು ಜನಪದ ರೂಪ. ಇದರ ಮೂಲ ‘ಶೌಕ್’ ಎಂದರೆ ಹವ್ಯಾಸ. ಶೌಕೀನ್ ಎಂದರೆ ಹವ್ಯಾಸವುಳ್ಳವನು, ಶೌಕಿದಾರ್ ಎಂದರೆ ಹವ್ಯಾಸವನ್ನು ಸಾಕಿಕೊಂಡವನು. ಬ್ರಿಟಿಷ್ ಕಾಲದ ಗ್ರಾಮ ಲೆಕ್ಕಗಳಲ್ಲಿ ‘ಪಾರಿವಾಳದ ಶೋಕಿದಾರ್’ ಎಂದು ಬರೆಯುತ್ತಿದ್ದರು. ಟಿಪ್ಪುವಿನ ದಾಖಲೆಗಳಲ್ಲಿ ‘ಕಬೂತರ್ ಪರವರ್’ ಎಂದಿದೆ. ಅಂದರೆ ಶೋಕಿದಾರ್ ಪದವು ಪುಸ್ತಕದ ಪದವಲ್ಲ, ಜನರ ಬಾಯಲ್ಲಿ ಹುಟ್ಟಿದ ಜಾನಪದ ಇತಿಹಾಸ.
ಶ್ರೀರಂಗಪಟ್ಟಣದಿಂದ ಆಧುನಿಕ ಅಂಚೆಗೆ. 1799ರ ನಂತರ ಬ್ರಿಟಿಷರು 1804ರಲ್ಲಿ ‘ಸೇರಿಂಗಪಟಂ ಪೋಸ್ಟ್ ಆಫೀಸ್’ ಪ್ರಾರಂಭಿಸಿದರು. 1840ರಲ್ಲಿ ಬ್ರಿಟಿಷ್ ಅಂಚೆ ಚೀಟಿ ಬಳಕೆ ಬಂತು. ಅದರ ಜೊತೆ ಮೈಸೂರು ಮಹಾರಾಜರು ‘Mysore Anchal’ ಎಂಬ ಪ್ರತ್ಯೇಕ ಅಂಚೆ ವ್ಯವಸ್ಥೆ ಇಟ್ಟುಕೊಂಡಿದ್ದರು. ಈ ಆಂಚೆ ಚೀಟಿಗಳು ಇಂದಿಗೂ ಸಂಗ್ರಾಹಕರಿಗೆ ಅಮೂಲ್ಯವಾಗಿದೆ.
ಇಂದು ಶ್ರೀರಂಗಪಟ್ಟಣದ ಎರಡುನೂರು ವರ್ಷ ಹಳೆಯ ಅಂಚೆ ಕಚೇರಿ ಇನ್ನೂ ಕೆಲಸ ಮಾಡುತ್ತಿದೆ. ಅಲ್ಲಿ ಪಾರಿವಾಳದ ಬದಲು ಸ್ಪೀಡ್ ಪೋಸ್ಟ್, ಆಧಾರ್ ಸೇವೆ ನಡೆಯುತ್ತದೆ. ಕೋಟೆಯ ಗೋಡೆಯ ಮೇಲೆ ಕುಳಿತ ಪಾರಿವಾಳವನ್ನು ನೋಡಿದಾಗಲೆಲ್ಲಾ ಅನ್ನಿಸುತ್ತದೆ.ಒಂದು ಕಾಲದಲ್ಲಿ ಅದರ ರೆಕ್ಕೆಯಲ್ಲೇ ಒಂದು ಸಾಮ್ರಾಜ್ಯದ ಭವಿಷ್ಯ ಹಾರುತ್ತಿತ್ತು. ಆ ಪಾರಿವಾಳವೇ ಇಂದಿನ ಇ-ಮೇಲ್ ನ ಮೊದಲ ರೂಪವಾಗಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





