ನವದೆಹಲಿ: ಇಂದು ಬಹಳ ಮಹತ್ವದ ದಿನ. ಭಾರತದ ಜನರನ್ನು ಬೆದರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಬೇಕಿತ್ತು. ನೀವು ನಮ್ಮನ್ನು ಹೊಡೆಯಲು ಸಾಧ್ಯವಿಲ್ಲ, ಬೆದರಿಸಲು ಸಾಧ್ಯವಿಲ್ಲ, ಭಯಪಡಿಸಲು ಸಾಧ್ಯವಿಲ್ಲ. ನಿಮ್ಮ ದಬ್ಬಾಳಿಕೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಶಾಂತಿಯುತ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಖಂಡಿಸಿ ಇವರೂ ಕೂಡ “ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆಯೇ ಉಡಾಫೆ ತೋರುವ ದಬ್ಬಾಳಿಕೆಗಾರರು ಎಂದು ಕರೆದಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಪ್ರತಿಭಟನಾಕಾರರನ್ನು ಎದುರಿಸುವ ಧೈರ್ಯವಿದ್ದರೆ ಹೊರಗೆ ಬಂದು ಮುಖಾಮುಖಿಯಾಗಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಸಂವಿಧಾನವನ್ನು ಕೊಲ್ಲುತ್ತಿರುವವರ ವಿರುದ್ಧ, ನಮ್ಮ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವವರ ವಿರುದ್ಧ ಪ್ರತಿಯೊಬ್ಬರೂ ನಿಲ್ಲಲಿದ್ದಾರೆ. ಎಷ್ಟೇ ಸಮಯ ಹಿಡಿದರೂ ನಾವು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಅಲ್ಲದೆ, ಪ್ರತಿಭಟನೆಗೆ ಬೆಂಬಲ ನೀಡಿದ ನಾಗರಿಕ ಸಮಾಜದ ಸಂಘಟನೆಗಳಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದ ಪರಿಕಲ್ಪನೆ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬೀದಿಗಿಳಿದ ಪ್ರತಿಯೊಬ್ಬರ ಬಗ್ಗೆಯೂ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ಪ್ರಕರಣದಲ್ಲಿ ಅನುಮೋದಿತ ಸಾಕ್ಷಿಯಾಗಿ ಸಹಕರಿಸಬೇಕು ಎಂದು ಆಗ್ರಹಿಸಿದ್ದರು.
ರಾಜೀನಾಮೆ ನೀಡಿ ಮಾಫಿ ಸಾಕ್ಷಿಯಾಗಿ. ನೀವು ತಪ್ಪು ಮಾಡಿದ್ದೀರಿ, ಆದರೆ, ಆ ತಪ್ಪಿನ ಹಿಂದಿನ ಸೂತ್ರಧಾರ ನೀವಲ್ಲ. ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವು ಕೇವಲ ಜ್ಞಾನೇಶ್ ಕುಮಾರ್ ಅವರ ವಿರುದ್ಧವಲ್ಲ, ಬದಲಾಗಿ ಅವರ ಹಿಂದೆ ಇರುವ ದೊಡ್ಡ ಶಕ್ತಿಗಳ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ INDIA ಮೈತ್ರಿಕೂಟದ ನಾಯಕರು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ.
ಪ್ರತಿಪಕ್ಷಗಳ ಹೋರಾಟವು ಪ್ರತ್ಯೇಕ ರಾಜಕೀಯ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ಸರಣಿಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ರಕ್ಷಿಸುವ ಸಾಮೂಹಿಕ ಹೋರಾಟವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಲ್ಲಿ ಯಾವುದೇ ಪ್ರತ್ಯೇಕ ಪ್ರತಿಭಟನೆಗಳಿಲ್ಲ. ಇದೊಂದೇ ಪ್ರತಿಭಟನೆ. ಸಂವಿಧಾನವನ್ನು ರಕ್ಷಿಸಲು ಬದ್ಧರಾಗಿರುವ ಪ್ರತಿಯೊಬ್ಬರಿಗೂ ನಮ್ಮ ಬೆಂಬಲವಿದೆ. ಇದು ಭಾರತೀಯ ಜನರ ಮೇಲಿನ ನಮ್ಮ ಪ್ರೀತಿಯ ಅಭಿವ್ಯಕ್ತಿ ಎಂದು ಹೇಳಿದ್ದಾರೆ.
ಇದೇ ವೇಳೆ ಸುಪ್ರೀಂ ಕೋರ್ಟ್ ಕಡೆಗೆ ನಡೆದ ಕಾಂಗ್ರೆಸ್‌ನ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ರಾಹುಲ್ ಗಾಂಧಿ ಧನ್ಯವಾದ ಅರ್ಪಿಸಿದ್ದಾರೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿರುವವರ ವಿರುದ್ಧ ಪ್ರತಿಯೊಬ್ಬರೂ ಹೋರಾಡಲಿದ್ದಾರೆ ಎಂದು ಹೇಳಿದ್ದಾರೆ.
“ಮೊನ್ನೆ ಯುವಕರನ್ನು ಹೊಡೆಯುತ್ತಿದ್ದ ಆರ್‌ಎಸ್‌ಎಸ್‌ನ ಹೇಡಿಗಳು ಎಲ್ಲಿದ್ದಾರೆ ಎಂದು ನಾನು ಯೋಚಿಸುತ್ತಿದ್ದೆ. ಅವರು ಎಲ್ಲಿದ್ದಾರೆ? ಏಕೆಂದರೆ ನನಗೆ ಅವರು ಕಾಣಿಸಲಿಲ್ಲ. ನಿಮ್ಮ ಆ ಚಿಕ್ಕ ಶಾಲುಗಳನ್ನು ಧರಿಸಿಕೊಂಡು ಹೊರಗೆ ಬಂದು ನೋಡಿ, ಏನಾಗುತ್ತದೆ ಎಂದು. ನೀವು ಮೂಲತಃ ಭಾರತದ ಪ್ರಧಾನಿಯಂತೆಯೇ ದಬ್ಬಾಳಿಕೆಕೋರರು. ನೀವು ಎದುರಿಸಿ ನಿಲ್ಲಲು ಸಾಧ್ಯವಿಲ್ಲ. ಅಧಿಕಾರವನ್ನು ಬಳಸಿಕೊಂಡು ಮಾತ್ರ ಹೋರಾಡಬಲ್ಲಿರಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ವಾರಾಂತ್ಯದಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಬಿಜೆಪಿ ನೇತೃತ್ವದ ಸರ್ಕಾರ ಗೂಂಡಾಗಳನ್ನು ಕಳುಹಿಸಿದೆ ಎಂದು ಆರೋಪಿಸಿದ್ದಾರೆ.





