ಕರ್ನಾಟಕದ ಇತಿಹಾಸದಲ್ಲಿ ಕೆಲವು ಹೆಸರುಗಳು ಕೇವಲ ರಾಜರಾಗಿ ಉಳಿಯುವುದಿಲ್ಲ, ಅವು ಶೌರ್ಯದ ಸಂಕೇತವಾಗಿ, ಸ್ವಾಭಿಮಾನದ ಪ್ರತೀಕವಾಗಿ ಉಳಿಯುತ್ತವೆ. ಅಂತಹ ಹೆಸರುಗಳಲ್ಲಿ ಚಿತ್ರದುರ್ಗದ ಕೊನೆಯ ದೊರೆ ವೀರ ಮದಕರಿ ನಾಯಕ V ಅವರದ್ದು ಅಗ್ರಸ್ಥಾನದಲ್ಲಿದೆ.
ಅಕ್ಟೋಬರ್ 13 ಅವರ ಜನ್ಮ ದಿನ. ಇಂದಿಗೆ 283 ವರ್ಷಗಳ ಹಿಂದೆ 1742ರ ಅಕ್ಟೋಬರ್ 13 ರಂದು ಹೊಸದುರ್ಗ ತಾಲೂಕಿನ ಜನಕಲ್ ಗ್ರಾಮದಲ್ಲಿ ಭರಮಪ್ಪ ನಾಯಕರ ಮಗನಾಗಿ ಜನಿಸಿದ ಈ ವೀರ, ಮುಂದೆ ‘ದುರ್ಗದ ಹುಲಿ’, ‘ಗಂಡುಗಲಿ ಮದಕರಿ’, ‘ಎಪ್ಪತ್ತೇಳು ಪಾಳೇಗಾರರ ಗಂಡ’, ‘ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕ’ ಎಂಬ ಬಿರುದುಗಳೊಂದಿಗೆ ಇತಿಹಾಸದಲ್ಲಿ ಅಮರನಾದರು.
ವಿಜಯನಗರದ ಕುಡಿಯಿಂದ ಸ್ವತಂತ್ರ ಸಾಮ್ರಾಜ್ಯಕ್ಕೆ ಚಿತ್ರದುರ್ಗ ನಾಯಕರ ಇತಿಹಾಸ ವಿಜಯನಗರ ಸಾಮ್ರಾಜ್ಯದೊಂದಿಗೆ ಬೆಸೆದುಕೊಂಡಿದೆ. ಸಾಳುವ ನರಸಿಂಹರಾಯರ ಕಾಲದಲ್ಲಿ ಮಟ್ಟಿ ತಿಮ್ಮಣ್ಣ ನಾಯಕ ಚಿತ್ರದುರ್ಗದ ಪ್ರಥಮ ನಾಯಕನಾಗಿ ನೇಮಕಗೊಂಡ. 1565ರಲ್ಲಿ ವಿಜಯನಗರ ಪತನದ ನಂತರ ತಿಮ್ಮಣ್ಣನ ಮಗ ಒಬಣ್ಣ ಸ್ವತಂತ್ರನಾಗಿ ‘ಮದಕರಿ’ ಎಂಬ ಬಿರುದು ಧರಿಸಿದ. ಮದಕರಿ ಎಂದರೆ ಮದವೇರಿದ ಆನೆ. ವೈರಿಗಳ ಪಾಲಿಗೆ ಆನೆಯಂತೆ ಭಯಂಕರನಾಗಿದ್ದರಿಂದ ಈ ಹೆಸರು ಬಂದಿತು.
ಈ ವಂಶದಲ್ಲಿ 1758ರಲ್ಲಿ ಪಟ್ಟಕ್ಕೆ ಬಂದವರು ಮದಕರಿ ನಾಯಕ V. ಆಗ ಅವರಿಗೆ ಕೇವಲ 16 ವರ್ಷ. ಕಸ್ತೂರಿ ರಂಗಪ್ಪ ನಾಯಕ II ನಂತರ ಪಟ್ಟಕ್ಕೆ ಬಂದ ಅವರು ಅಲ್ಪಕಾಲದಲ್ಲೇ ಕುಶಲ ಆಡಳಿತಗಾರ, ರಣತಂತ್ರಜ್ಞ ಎಂದು ಹೆಸರಾದರು.
ಏಳು ಸುತ್ತಿನ ಕೋಟೆಯ ಅಜೇಯ ದೊರೆ.
ಚಿತ್ರದುರ್ಗದ ಕೋಟೆ ಭಾರತದ ಅತ್ಯಂತ ಬಲಿಷ್ಠ ಕೋಟೆಗಳಲ್ಲಿ ಒಂದು. ಏಳು ಸುತ್ತಿನ ಗೋಡೆ, ಬಂಡೆಗಳ ಮಧ್ಯೆ ಅಡಗಿದ ರಹಸ್ಯ ದ್ವಾರಗಳು, ‘ಕಲ್ಲಿನ ಕೋಟೆ’ ಎಂದೇ ಪ್ರಸಿದ್ಧ. ಈ ಕೋಟೆಯನ್ನು ನಂಬಿಕೊಂಡೇ ಮದಕರಿ ನಾಯಕರು ಮರಾಠರು, ಮೊಘಲರು ಮತ್ತು ಹೈದರಾಲಿಯಂತಹ ಪ್ರಬಲ ಶಕ್ತಿಗಳ ನಡುವೆ ಸ್ವತಂತ್ರ ಅಸ್ತಿತ್ವ ಕಾಯ್ದುಕೊಂಡು ಬಂದಿದ್ದರು.
ಪೇಶ್ವೆ ಮಾಧವರಾವ್ I ನಿಡಗಲ್ಲು ಕೋಟೆ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ಮದಕರಿ ನಾಯಕರಿಗೆ ‘ಎಪ್ಪತ್ತೇಳು ಪಾಳೇಗಾರರ ಗಂಡ’ ಎಂಬ ಬಿರುದು ನೀಡಿದ್ದರು. ಇದು ಅವರ ಪ್ರಭಾವ ಎಷ್ಟು ವಿಸ್ತಾರವಾಗಿತ್ತು ಎಂಬುದಕ್ಕೆ ಸಾಕ್ಷಿ. 0f23
ಆದರೆ ಅವರ ಜೀವನದ ದೊಡ್ಡ ಸವಾಲು ಎದುರಾಗಿದ್ದು ಮೈಸೂರಿನ ಹೈದರಾಲಿಯಿಂದ. ಹೈದರಾಲಿ ಮೂರು ಬಾರಿ ಚಿತ್ರದುರ್ಗದ ಮೇಲೆ ದಾಳಿ ಮಾಡಿದ. 1760ರ ಮೊದಲ ಮುತ್ತಿಗೆಯಲ್ಲಿ 4 ಲಕ್ಷ ರೂಪಾಯಿ ಕಪ್ಪ ಕೊಟ್ಟು ಸಂಧಾನ ಮಾಡಿಕೊಳ್ಳಲಾಯಿತು. 1770ರ ಎರಡನೇ ದಾಳಿಯನ್ನೂ ಮದಕರಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು.
ಒನಕೆ ಓಬವ್ವನ ಶೌರ್ಯಗಾಥೆ ಹುಟ್ಟಿದ ಕೋಟೆ.
1777-79ರ ಮೂರನೇ ಮತ್ತು ಅಂತಿಮ ಮುತ್ತಿಗೆ ಇತಿಹಾಸ ಪ್ರಸಿದ್ಧ. ಹೈದರಾಲಿಯ ಸೈನ್ಯ ಕೋಟೆಯನ್ನು ತಿಂಗಳುಗಟ್ಟಲೆ ಸುತ್ತುವರಿದಿತ್ತು. ಈ ಸಂದರ್ಭದಲ್ಲೇ ಕನ್ನಡ ನಾಡಿನ ವೀರವನಿತೆ ಒನಕೆ ಓಬವ್ವಳ ಧೀರಗಾಥೆ ನಡೆಯಿತು. ಕೋಟೆಯ ಕಾವಲುಗಾರನ ಹೆಂಡತಿ ಓಬವ್ವ, ತನ್ನ ಗಂಡ ಊಟಕ್ಕೆ ಹೋದಾಗ ಕೋಟೆಯ ರಹಸ್ಯ ಬಿಲದ ಮೂಲಕ ನುಸುಳುತ್ತಿದ್ದ ಹೈದರಾಲಿಯ ಸೈನಿಕರನ್ನು ಒನಕೆಯಿಂದಲೇ ಹೊಡೆದು ನೂರಾರು ಸೈನಿಕರನ್ನು ಕೊಂದಳು. ಇಂದಿಗೂ ಆ ಕಿಂಡಿ ‘ಓಬವ್ವನ ಕಿಂಡಿ’ ಮತ್ತು ಪಕ್ಕದಲ್ಲಿನ ‘ತಣ್ಣೀರು ದೋಣಿ’ ಆ ಶೌರ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ವಂಚನೆ ಮತ್ತು ಪತನ.
ಮದಕರಿ ನಾಯಕರ ರಾಜತಂತ್ರವೆಂದರೆ ಹೈದರಾಲಿ ಮತ್ತು ಮರಾಠರ ನಡುವೆ ಸಮತೋಲನ ಸಾಧಿಸುವುದು. ಆದರೆ 1779ರಲ್ಲಿ ಈ ತಂತ್ರವೇ ಅವರಿಗೆ ಮುಳುವಾಯಿತು. ಅವರ ಆಸ್ಥಾನದಲ್ಲಿದ್ದ ಕೆಲ ಮುಸ್ಲಿಂ ಅಧಿಕಾರಿಗಳು ಮತ್ತು ಮರಾಠರ ದ್ರೋಹದಿಂದ ಕೋಟೆಯ ರಕ್ಷಣೆ ದುರ್ಬಲವಾಯಿತು. ಹೈದರಾಲಿ ಕೋಟೆಯನ್ನು ವಶಪಡಿಸಿಕೊಂಡ.
ಬ್ರಿಟಿಷ್ ಇತಿಹಾಸಕಾರರಾದ ವಿಲ್ಕ್ಸ್ ಮತ್ತು ಬೌರಿಂಗ್ ದಾಖಲೆಗಳ ಪ್ರಕಾರ, ಹೈದರಾಲಿ ಚಿತ್ರದುರ್ಗ ಗೆದ್ದ ನಂತರ ಕೇವಲ ದೊರೆಯನ್ನು ಸೆರೆಹಿಡಿಯಲಿಲ್ಲ, ಬೇಡರ ಸಮುದಾಯದ ಶಕ್ತಿಯನ್ನು ಮುರಿಯಲು 20,000ಕ್ಕೂ ಹೆಚ್ಚು ಬೇಡರನ್ನು ಶ್ರೀರಂಗಪಟ್ಟಣಕ್ಕೆ ಒಯ್ದು ತನ್ನ ಚೇಲಾ ಪಡೆಗೆ ಸೇರಿಸಿಕೊಂಡ.
ಮದಕರಿ ನಾಯಕರನ್ನು ಕುಟುಂಬ ಸಮೇತ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಇಡಲಾಯಿತು. ಅಲ್ಲಿಯೇ 1779ರಲ್ಲಿ (ಕೆಲ ದಾಖಲೆಗಳ ಪ್ರಕಾರ 1782) ಅವರು ಮರಣ ಹೊಂದಿದರು. 200 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಚಿತ್ರದುರ್ಗ ನಾಯಕ ವಂಶ ಅವರೊಂದಿಗೆ ಅಂತ್ಯವಾಯಿತು.
ಇಂದಿಗೂ ಜೀವಂತವಾಗಿರುವ ಪರಂಪರೆಯಾಗಿದ್ದು,ಮದಕರಿ ನಾಯಕರ ಕಥೆ ಕೇವಲ ಯುದ್ಧದ ಕಥೆಯಲ್ಲ. ಅವರು ಕೆರೆ-ಕಟ್ಟೆ, ದೇವಾಲಯಗಳನ್ನು ಕಟ್ಟಿಸಿದರು. ಜನರಿಗೆ ಸುಭದ್ರ ಆಡಳಿತ ನೀಡಿದರು. ಅದಕ್ಕಾಗಿಯೇ ಇಂದಿಗೂ ಚಿತ್ರದುರ್ಗದ ಜನ ಅವರನ್ನು ‘ದುರ್ಗದ ಹುಲಿ’ ಎಂದು ಆರಾಧಿಸುತ್ತಾರೆ.
ಸಾಹಿತ್ಯದಲ್ಲೂ ಅವರ ಪ್ರಭಾವ ಅಮರ. ಟಿ.ಆರ್. ಸುಬ್ಬರಾವ್ ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಬಿ.ಎಲ್. ವೇಣು ಅವರ ‘ಗಂಡುಗಲಿ ಮದಕರಿ ನಾಯಕ’ ಕೃತಿಯೂ ಪ್ರಸಿದ್ಧವಾಗಿದೆ.
ಅಕ್ಟೋಬರ್ 13ರಂದು ನಾವು ಆಚರಿಸುವ ಜಯಂತಿ ಕೇವಲ ಒಬ್ಬ ರಾಜನ ಹುಟ್ಟುಹಬ್ಬವಲ್ಲ, ಅದು ಕನ್ನಡ ನಾಡಿನ ಸ್ವಾಭಿಮಾನ, ಶೌರ್ಯ ಮತ್ತು ಜನಪರ ಆಡಳಿತದ ಸಂಕೇತದ ಜಯಂತಿ. ಕಲ್ಲಿನ ಕೋಟೆಯ ಮೇಲೆ ಹಾರುವ ಕೆಂಪು ಧ್ವಜ ಇಂದಿಗೂ ಹೇಳುತ್ತಿದೆ ಮದಕರಿ ನಾಯಕ ಸತ್ತಿಲ್ಲ, ಆತ ಚಿತ್ರದುರ್ಗದ ಪ್ರತಿ ಬಂಡೆಯಲ್ಲೂ, ಪ್ರತಿ ಉಸಿರಲ್ಲೂ ಜೀವಂತವಾಗಿದ್ದಾರೆ ಎಂದು ಕೆ ಎಸ್ ಜಯಶಂಕರ್ ಹೇಳಿದ್ದಾರೆ.





