ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸಿಗಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯು ಕೇವಲ ಮತಾಂತರದ ಆಧಾರದ ಮೇಲೆ ‘ಹಿಂದುಳಿದ ವರ್ಗದ (ಮುಸ್ಲಿಂ)’ ವರ್ಗದಡಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಬ್ಬ ವ್ಯಕ್ತಿಯ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ಹಿಂದೂಯೇತರ ಸಾಮಾಜಿಕ ವ್ಯವಸ್ಥೆಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ

ಧಾರ್ಮಿಕ ಮತಾಂತರ ಮತ್ತು ಮೀಸಲಾತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ತನ್ನ ಹಿಂದಿನ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಹೊಸ ಧರ್ಮದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ.

ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ಹಿಂದೂಯೇತರ ಧಾರ್ಮಿಕ ವ್ಯವಸ್ಥೆಗೆ ಪರಿವರ್ತನೆ ಹೊಂದುವ ವ್ಯಕ್ತಿಯು ಸಂವಿಧಾನದ 16(4) ನೇ ವಿಧಿಯ ಅಡಿಯಲ್ಲಿ ವಿಶೇಷ ಉದ್ಯೋಗ ಅಥವಾ ಶಿಕ್ಷಣ ಸೌಲಭ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹಿಂದಿನ ಧರ್ಮದಲ್ಲಿ ಆತ ಅನುಭವಿಸಿದ ಸಾಮಾಜಿಕ ಹಿಂದುಳಿದಿರುವಿಕೆಯು ಹೊಸ ಧರ್ಮಕ್ಕೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಿಂದುಳಿದ ವರ್ಗಗಳು (BC), ಅತ್ಯಂತ ಹಿಂದುಳಿದ ವರ್ಗಗಳು (MBC), ವಿಮುಕ್ತ ಸಮುದಾಯಗಳು (DNC) ಮತ್ತು ಪರಿಶಿಷ್ಟ ಜಾತಿಗಳಿಗೆ (SC) ಸೇರಿದ ವ್ಯಕ್ತಿಗಳು ಇಸ್ಲಾಂಗೆ ಮತಾಂತರಗೊಂಡಾಗ ಅವರಿಗೆ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ನೀಡಿ ಮೀಸಲಾತಿ ನೀಡಲು ತಮಿಳುನಾಡು ಸರ್ಕಾರ ಜಿಒ ಹೊರಡಿಸಿತ್ತು. ಈ ಆದೇಶವು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಮತಾಂತರಗೊಂಡವರಿಗೆ ‘ಹಿಂದುಳಿದ ವರ್ಗದ ಮುಸ್ಲಿಂ’ ಕೋಟಾ ಕಲ್ಪಿಸಲು ಮುಂದಾಗಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

1950 ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶದ ಪ್ಯಾರಾಗ್ರಾಫ್ 3 ರ ಅನ್ವಯ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳನ್ನು (ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮ) ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ.

ಎಸ್‌ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣವೇ ತಮ್ಮ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮೀಸಲಾತಿ ಪ್ರಯೋಜನಗಳನ್ನು ಕಾನೂನುಬದ್ಧವಾಗಿ ಕಳೆದುಕೊಳ್ಳುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ತಮಗೆ ಹಿಂದುಳಿದ ವರ್ಗದ ಮುಸ್ಲಿಂ (BCM) ಕೋಟಾ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗದ ವರದಿ ನಿರೀಕ್ಷೆ: ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ (SC) ಸ್ಥಾನಮಾನ ನೀಡಬೇಕೇ ಬೇಡವೇ ಎಂಬುದನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಮಾಜಿ ಸಿಜೆಐ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ. ಈ ವರದಿ ಇನ್ನಷ್ಟೇ ಅಂತಿಮಗೊಳ್ಳಬೇಕಿದ್ದು, ಈ ಮಧ್ಯೆ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ರಾಷ್ಟ್ರಮಟ್ಟದ ಮತಾಂತರ ಹಾಗೂ ಮೀಸಲಾತಿ ಚರ್ಚೆಗಳಲ್ಲಿ ಅತ್ಯಂತ ಮಹತ್ವದ ಕಾನೂನು ನಿದರ್ಶನವಾಗಿ ಹೊರಹೊಮ್ಮಿರುವ ಮಾಹಿತಿ ಬೆಳಕಿಗೆ ಬಂದಿದೆ,

ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ತೀರ್ಪು: ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ: ತಮಿಳುನಾಡು ಸರ್ಕಾರವು ಕೆಲವು ವರ್ಷಗಳ ಹಿಂದೆ ಮತಾಂತರಗೊಂಡ ಮುಸ್ಲಿಮರಿಗೆ ಹಿಂದುಳಿದ ವರ್ಗದ ಪ್ರಮಾಣಪತ್ರ ನೀಡಲು ಅನುಮತಿ ನೀಡಿ ಹೊರಡಿಸಿದ್ದ 2024ರ ಸರ್ಕಾರಿ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗ ವಜಾಗೊಳಿಸಿದೆ.

ಕೃತಕ ಗುಂಪು ಸೃಷ್ಟಿ ತಪ್ಪು: ಮತಾಂತರದ ಆಧಾರದ ಮೇಲೆ ಮೀಸಲಾತಿ ನೀಡುವುದು ಕಾನೂನುಬಾಹಿರ ಹಾಗೂ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಒಂದು “ಕೃತಕ ಗುಂಪನ್ನು” ಸೃಷ್ಟಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ

ಹಿಂದೂ ಧರ್ಮದ ಹಿಂದುಳಿದ ವರ್ಗಕ್ಕೆ (BC/MBC/SC) ಸೇರಿದ ವ್ಯಕ್ತಿ ಇಸ್ಲಾಂಗೆ ಮತಾಂತರಗೊಂಡ ತಕ್ಷಣ, ಆತನಿಗೆ ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗದ ಮೀಸಲಾತಿ ಸೌಲಭ್ಯಗಳು ತಾನಾಗಿಯೇ ವರ್ಗಾವಣೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post