ಕೇವಲ ಹಸಿರು ಪಟಾಕಿ ಮಾತ್ರ ಮಾರಾಟ, ಬಳಕೆಗೆ ಅವಕಾಶ: ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು: ಪರಿಸರ ಸ್ನೇಹಿ ದೀಪಾವಳಿ ಹಬ್ಬ-2026″ ರ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಮೇಲ್ಕಂಡ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾನ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಜನರಲ್ಲಿ ಕೋರಿದ್ದಾರೆ‌.

ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ವಾಡಿಕೆಯಾಗಿರುತ್ತದೆ. ಪಟಾಕಿ ತಯಾರಿಕೆಯಲ್ಲಿ ಅನೇಕ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ಪಟಾಕಿಯಲ್ಲಿ ಬಳಕೆ ಮಾಡುವ ರಾಸಾಯನಿಕಗಳು ಸ್ಪೋಟ ಆಗುವ ಗುಣಗಳನ್ನು ಹೊಂದಿರುತ್ತದೆ. ಪಟಾಕಿ ಸಿಡಿಸಿದ ಮೇಲೆ ಅದರಿಂದ ಬಿಡುಗಡೆಯಾಗುವ ರಾಸಾಯನಿಕ ವಸ್ತುಗಳ ವಾತಾವರಣದಲ್ಲಿ ಬಿಡುಗಡೆಗೊಂಡು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪಟಾಕಿಗಳನ್ನು ಅಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ, ಅವುಗಳು ಸ್ಫೋಟಗೊಂಡು ಅನೇಕ ಜನರ ಪ್ರಾಣಹಾನಿ/ಆರೋಗ್ಯಕ್ಕೆ ತೊಂದರೆಯಾಗಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಹಬ್ಬದ ಸಮಯದಲ್ಲಿ ವಾಯುವಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ವಿಶ್ಲೇಷಣಾ ವರದಿಗಳು ವಾಯುಮಾಲಿನ್ಯವಾಗಿರುವುದನ್ನು ಪ್ರತಿಪಾದಿಸುತ್ತಿದೆ. ವಾಯು ಮಾಲಿನ್ಯವಾಗುತ್ತಿರುವುದನ್ನು ಗಮನಿಸಿದ ಸರ್ವೋಚ್ಛ ನ್ಯಾಯಾಲಯವು ಮಾರ್ಗಸೂಚಿಗಳನ್ನು ರೂಪಿಸಿ ಮಾಲಿನ್ಯ ತಡೆಗಟ್ಟುವ ಸಂಬಂಧ ಸರ್ಕಾರವು ಈ ಬಗ್ಗೆ ಕ್ರಮವಹಿಸುವಂತೆ ತೀರ್ಪು ನೀಡಿರುತ್ತದೆ. ಅದರಂತೆ ಸರ್ಕಾರವು ವಾಯುಮಾಲಿನ್ಯ ತಡೆಗಟ್ಟುವ ಸಂಬಂಧ ಕೆಲವೊಂದು ಮಾರ್ಗಸೂಚಿಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿವಿಧ ಇಲಾಖೆ/ಪ್ರಾಧಿಕಾರಗಳಿಗೆ ಆದೇಶ ನೀಡಿರುತ್ತದೆ.

ಈ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಮಯ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸ್ಫೋಟಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದಲ್ಲದೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು, ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿರುತ್ತದೆ.

‘ಹಸಿರು ಪಟಾಕಿ’ ಕುರಿತು ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಸ್ಥಾಪಿತಗೊಂಡಿರುವ “ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರ” ಕ್ಕೆ ಶಬ್ಧ ಮಾಲಿನ್ಯ ನಿಯಂತ್ರಣ ಕಾರ್ಯವನ್ನು ವಹಿಸಲಾಗಿರುತ್ತದೆ.

2026ನೇ ಸಾಲಿನ ದೀಪಾವಳಿ ಹಬ್ಬವನ್ನು “ಪರಿಸರ ಸ್ನೇಹಿ ದೀಪಾವಳ” ಯಾಗಿ ಆಚರಿಸುವ ಉದ್ದೇಶದಿಂದ ವಾಯು ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ರಕ್ಷಣೆಯನ್ನು ಖಚಿತಪಡಿಸುವುದು ಅತ್ಯಂತ ಅಗತ್ಯವಾಗಿದೆ.

ಕರ್ನಾಟಕ ರಾಜ್ಯದಾದ್ಯಂತ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಸಾಗಾಣಿಕೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ‌ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ನಗರ/ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

1) ನಿಷೇಧಿತ ಪಟಾಕಿಗಳನ್ನು ಯಾವುದೇ ರೀತಿಯಲ್ಲಿ ಉತ್ಪಾದಿಸುವುದು, ಸಂಗ್ರಹಿಸುವುದು, ಸಾಗಾಣಿಕೆ ಮಾಡುವುದು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು.

2) ಹಸಿರು ಪಟಾಕಿಗಳು ಮಾತ್ರ, ಸಂಬಂಧಿತ ಪ್ರಾಧಿಕಾರಗಳು ನಿಗಧಿಪಡಿಸಿರುವ ಮಾನದಂಡಗಳು ಮತ್ತು ನಿಯಮಗಳಿಗೆ ಅನುಗುಣವಾಗಿ ಮಾರಾಟ ಹಾಗೂ ಬಳಕೆಗೆ ಅವಕಾಶವಿರುತ್ತದೆ.

3) ಹಸಿರು ಪಟಾಕಿಗಳನ್ನು ಮಾತ್ರ ಅಧಿಕೃತ/ಅನುಮೋದಿತ ಮಾರಾಟಗಾರರಿಂದ ಖರೀದಿಸುವುದು. ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿಗಳ ಗುರುತು ಹಾಗೂ QR ಕೋಡ್/ಅನುಮೋದಿತ ಗುರುತು ಇರುವುದನ್ನು ಖಚಿತಪಡಿಸಿಕೊಳ್ಳುವುದು.

4) ನಿಷೇಧಿತ ಪಟಾಕಿಗಳು ಅಥವಾ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಯಾವುದೇ ಕಾರಣಕ್ಕೂ ಅನುಮತಿಸಲಾಗುವುದಿಲ್ಲ.

5) ಪಟಾಕಿ ಮಾರಾಟಗಾರರು ತಮ್ಮ ಪರವಾನಗಿ ಮತ್ತು ಸಂಬಂಧಿತ ಇಲಾಖೆಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

6) ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟ ನಡೆಯದಂತೆ ಸೂಕ್ತ ಪರಿಶೀಲನೆ ಮತ್ತು ಕ್ರಮ ಕೈಗೊಳ್ಳುವುದು.

7) ನಿಷೇಧಿತ ಪಟಾಕಿಗಳ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ, ಸಂಬಂಧಪಟ್ಟ ಕಾನೂನು ಮತ್ತು ನಿಯಮಗಳನ್ವಯ ದಂಡಾತ್ಮಕ/ಕಾನೂನು ಕ್ರಮ ಕೈಗೊಳ್ಳಲಾಗುವುದು.

8) ಸಾರ್ವಜನಿಕರು ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಉಂಟುಮಾಡುವ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಹಕರಿಸುವಂತೆ ಕೋರಲಾಗಿದೆ.

9) ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ನ್ಯಾಯಾಲಯಗಳು ಕಾಲಕಾಲಕ್ಕೆ ಹೊರಡಿಸಿರುವ ಸಮಯ, ಶಬ್ದಮಟ್ಟ ಹಾಗೂ ಇತರೆ ಎಲ್ಲಾ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದು.

10) ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವು ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ, ಸಾರ್ವಜನಿಕರು ಜವಾಬ್ದಾರಿಯುತವಾಗಿ ಮತ್ತು ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸುವುದು.

11) ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ “ಹಸಿರು ಪಟಾಕಿಗಳನ್ನು” ಮಾತ್ರ ಬಳಸುವಂತೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು.

12) ಹಸಿರು ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಪ್ರಮಾಣದಲ್ಲಿ ವಾಯು ಉಂಟುಮಾಡುವಂತೆ ಮಾಲಿನ್ಯಕಾರಕಗಳು ಮತ್ತು ಶಬ್ದ ಮಾಲಿನ್ಯವನ್ನು ವಿನ್ಯಾಸಗೊಳಿಸಲಾಗಿರುವುದರಿಂದ, ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಆಯ್ಕೆ ಮಾಡಿಕೊಂಡು ಬಳಸುವಂತೆ ಪ್ರೋತ್ಸಾಹಿಸುವುದು.

13) ಸಾರ್ವಜನಿಕರು ಹಸಿರು ಪಟಾಕಿಗಳನ್ನು ಖರೀದಿಸುವ ಸಂದರ್ಭದಲ್ಲಿ ಅವುಗಳ ಪ್ಯಾಕಿಂಗ್ ಮೇಲಿರುವ ಅಧಿಕೃತ ಗುರುತು/QR ಕೋಡ್ ಹಾಗೂ ಸಂಬಂಧಪಟ್ಟ ಪ್ರಮಾಣೀಕರಣವನ್ನು ಪರಿಶೀಲಿಸಿ, ಅನುಮೋದಿತ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ ಬಳಸುವಂತೆ ತಿಳಿಸುವುದು.

14) ಹೆಚ್ಚಿನ ಶಬ್ದ ಹಾಗೂ ಹೆಚ್ಚಿನ ಪ್ರಮಾಣದ ಹೊಗೆ ಉಂಟುಮಾಡುವ ಪಟಾಕಿಗಳನ್ನು ಬಳಸದೆ, ಕಡಿಮೆ ಶಬ್ದ ಮತ್ತು ಕಡಿಮೆ ಮಾಲಿನ್ಯ ಉಂಟುಮಾಡುವ ಹಸಿರು ಪಟಾಕಿಗಳಿಗೆ ಆದ್ಯತೆ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

15) ಹಸಿರು ಪಟಾಕಿಗಳ ಹೆಸರಿನಲ್ಲಿ ನಕಲಿ ಅಥವಾ ಅನುಮೋದಿತವಲ್ಲದ ಪಟಾಕಿಗಳ ಮಾರಾಟವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದು.

16) ಪಟಾಕಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಸಿಡಿಸುವಂತೆ ಸಾರ್ವಜನಿಕರಿಗೆ ಸೂಚಿಸುವುದು. ಆಸ್ಪತ್ರೆಗಳು, ಶಾಲೆಗಳು, ವೃದ್ಧಾಶ್ರಮಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳ ಸಮೀಪ ಪಟಾಕಿ ಸಿಡಿಸುವುದನ್ನು ತಪ್ಪಿಸುವಂತೆ ಅರಿವು ಮೂಡಿಸುವುದು.

17) ನಿಷೇಧಿತ ಪಟಾಕಿಗಳು, ಹೆಚ್ಚಿನ ಶಬ್ದ ಉಂಟುಮಾಡುವ ಪಟಾಕಿಗಳು ಹಾಗೂ ನಿಯಮಗಳಿಗೆ ವಿರುದ್ಧವಾಗಿ ಮಾರಾಟವಾಗುವ ಪಟಾಕಿಗಳ ವಿರುದ್ಧ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವುದು.

18) ಸಂಬಂಧಪಟ್ಟ ಇಲಾಖೆಗಳ
ಇಲಾಖೆಗಳ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ, ದೀಪಾವಳಿ ಸಂದರ್ಭದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಕ್ರಿಯಾ ಯೋಜನೆ ರೂಪಿಸುವುದು.

19) ಸಾರ್ವಜನಿಕ ಸ್ಥಳಗಳು, ಪ್ರಮುಖ ಮಾರುಕಟ್ಟೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಪಟಾಕಿಗಳಿಂದ ಉಂಟಾಗುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳುವುದು.

20) ಸಾರ್ವಜನಿಕರು ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನಿಷೇಧಿತ ಪಟಾಕಿಗಳ ಬಳಕೆಯನ್ನು ಗಮನಿಸಿದಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ/ಪೊಲೀಸ್ ಇಲಾಖೆ/ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತರುವಂತೆ ತಿಳಿಸುವುದು.

21) ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ “ಪಟಾಕಿ ರಹಿತ/ಪರಿಸರ ಸ್ನೇಹಿ ದೀಪಾವಳ” ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಈ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ಹಸಿರು ಪಟಾಕಿಗಳನ್ನು ಮಾತ್ರ ಬಳಸೋಣ, ಪಟಾಕಿಗಳ ಬಳಕೆಯನ್ನು ಮಿತಿಗೊಳಿಸೋಣ, ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡೋಣ ಹಾಗೂ ಆರೋಗ್ಯಕರ ಮತ್ತು ಸ್ವಚ್ಛ ಪರಿಸರವನ್ನು ಕಾಪಾಡೋಣ.”- ರಾಮಲಿಂಗಾ ರೆಡ್ಡಿ, ‌ಮಾನ್ಯ ಅರಣ್ಯ, ಪರಿಸರ‌ ಮತ್ತು ಜೀವಶಾಸ್ತ್ರ ಸಚಿವರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others