ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದು, ಈ ಕುರಿತು ಉಪ ಸಭಾಪತಿಯವರಿಗೆ ದಿನಾಂಕ 07.08.2026ರಂದು ಸಲ್ಲಿಸಲು ಸುದೀರ್ಘ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ. ಸಚಿವಾಲಯವು ಸಭಾಪತಿ ಸ್ಥಾನ ತೆರವಾಗಿರುವ ಕುರಿತು ಈಗಾಗಲೇ ಅಧಿಕೃತ ಅಧಿಸೂಚನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅವಿಶ್ವಾಸ ನಿರ್ಣಯದ ಭೀತಿ ಮತ್ತು ಪೀಠದ ಗೌರವ: ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತ ಗಳಿಸಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ತಮ್ಮದೇ ನಾಯಕರನ್ನು ಸಭಾಪತಿ ಪೀಠದಲ್ಲಿ ಕುಳ್ಳಿರಿಸಲು ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಹೊರಟ್ಟಿ ಅವರ ಮೇಲೆ ಹುದ್ದೆಯಿಂದ ಕೆಳಗಿಳಿಯಲು ಒತ್ತಡ ಹೇರಿದ್ದರು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಸದನದಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿ ಮತದಾನದ ಮೂಲಕ ನಿರ್ಗಮಿಸುವುದಕ್ಕಿಂತ, ಪೀಠದ ಘನತೆ ಹಾಗೂ ಗೌರವವನ್ನು ಎತ್ತಿಹಿಡಿಯುವ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುತ್ತಿರುವುದಾಗಿ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ಹೊರಟ್ಟಿ ಅವರ ಮನದಾಳದ ಮಾತು: “ನನ್ನ 46 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳನ್ನು ಹಾಗೂ ಹಲವು ಸಭಾಪತಿಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಪಕ್ಷಾತೀತವಾಗಿ, ಯಾವುದೇ ಕಪ್ಪುಚುಕ್ಕೆ ಬಾರದಂತೆ ಸದನದ ಕಲಾಪಗಳನ್ನು ನಿಭಾಯಿಸಿದ್ದೇನೆ. ಬಹುಮತದ ಬಲದಿಂದ ಸಾಂವಿಧಾನಿಕ ಹುದ್ದೆಯನ್ನು ವಶಪಡಿಸಿಕೊಳ್ಳುವ ಈ ನಡವಳಿಕೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸೂಕ್ತವಲ್ಲ. ಆದರೂ ಪೀಠಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತಳೆದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ರೇಸ್: ಇತ್ತೀಚಿನ ನಾಲ್ಕು ಕ್ಷೇತ್ರಗಳ ಚುನಾವಣಾ ಗೆಲುವಿನ ಬಳಿಕ 75 ಸದಸ್ಯರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸಂಖ್ಯಾಬಲ 39ಕ್ಕೆ ಏರಿಕೆಯಾಗಿದ್ದು, ಮೇಲ್ಮನೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ನೂತನ ಸಭಾಪತಿ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಸಲೀಂ ಅಹ್ಮದ್ ಅವರ ಹೆಸರು ಅಂತಿಮಗೊಂಡಿದ್ದು, ಶೀಘ್ರದಲ್ಲೇ ಹೊಸ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others