ಬೆಂಗಳೂರು : ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಇಲಾಖೆ ಕೈಗಾರಿಕೆಯಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್ಗಳ ನಿರ್ಮೂಲನೆ ಕುರಿತು ರಾಜ್ಯಮಟ್ಟದ ಸಂವೇದನಾಶೀಲತಾ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳು, ಆಹಾರ ಉದ್ಯಮದ ಪ್ರತಿನಿಧಿಗಳು, ಖಾದ್ಯ ತೈಲ ಉತ್ಪಾದಕರು, ತಾಂತ್ರಿಕ ತಜ್ಞರು ಹಾಗೂ ವಿವಿಧ ಅಭಿವೃದ್ಧಿ ಸಹಭಾಗಿಗಳು ಭಾಗವಹಿಸಿ, ಟ್ರಾನ್ಸ್ ಫ್ಯಾಟ್ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಚರ್ಚಿಸಿದರು.
ಟ್ರಾನ್ಸ್ ಫ್ಯಾಟ್ಗಳು ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳು, ಸ್ಥೂಲಕಾಯ, ಚಯಾಪಚಯ ಸಂಬಂಧಿತ ಅಸ್ವಸ್ಥತೆಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯಕಾರಿ ಅಂಶಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯಂತೆ, ಟ್ರಾನ್ಸ್ ಫ್ಯಾಟ್ ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 2.78 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.
ಭಾರತದಲ್ಲಿ ಕೊಬ್ಬು ಮತ್ತು ಎಣ್ಣೆಗಳಲ್ಲಿ ಕೈಗಾರಿಕೆಯಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್ ಪ್ರಮಾಣವನ್ನು ಶೇ.2ಕ್ಕಿಂತ ಕಡಿಮೆ ಮಿತಿಗೊಳಿಸುವ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ರಾಜ್ಯದಲ್ಲಿ ಈ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಪ್ರಯೋಗಾಲಯ ಪರೀಕ್ಷೆಗಳು, ಅಪಾಯ ಆಧಾರಿತ ತಪಾಸಣೆಗಳು ಹಾಗೂ ನಿರಂತರ ಜಾರಿ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಇಲಾಖೆ ನಿರ್ಧರಿಸಿದೆ.
ಇದುವರೆಗೆ ರಾಜ್ಯದಲ್ಲಿ 52 ಸಾವಿರಕ್ಕೂ ಹೆಚ್ಚು ಆಹಾರ ಉದ್ಯಮಗಳಿಗೆ ಟ್ರಾನ್ಸ್ ಫ್ಯಾಟ್ ನಿಯಮಗಳ ಕುರಿತು ಅರಿವು ಮೂಡಿಸಲಾಗಿದೆ. ಜೊತೆಗೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವ ಯೋಜನೆಯಡಿ 2024-26ರ ಅವಧಿಯಲ್ಲಿ 45.87 ಲಕ್ಷ ಲೀಟರ್ಗಿಂತ ಹೆಚ್ಚು ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿದೆ.
ನಿಯಮ ಉಲ್ಲಂಘನೆ ತಡೆಗಟ್ಟಲು ಇಲಾಖೆ 40 ಜಾರಿ ನೋಟಿಸ್ಗಳನ್ನು ನೀಡಿದ್ದು, 28.91 ಲಕ್ಷ ರೂ. ದಂಡ ವಿಧಿಸಲಾಗಿದೆ. ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಸಿದ ಜಾಗೃತಿ ಅಭಿಯಾನಗಳು 6 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿವೆ.
ವಿಷನ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಹಾಗೂ ರಿಸಲ್ಟ್ ಟು ಸೇವ್ ಲೈವ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ತರಬೇತಿ, ಸಾಮರ್ಥ್ಯ ವೃದ್ಧಿ ಹಾಗೂ ತಾಂತ್ರಿಕ ಬೆಂಬಲವನ್ನು ಇಲಾಖೆ ಮುಂದುವರಿಸುತ್ತಿದೆ. ಆಹಾರ ಸುರಕ್ಷತೆ ಇಲಾಖೆ ಕಟ್ಟುನಿಟ್ಟಿನ ಜಾರಿ, ಸಾರ್ವಜನಿಕ ಜಾಗೃತಿ ಹಾಗೂ ಆಹಾರ ಉದ್ಯಮದ ಸಕ್ರಿಯ ಸಹಭಾಗಿತ್ವದ ಮೂಲಕ “ಟ್ರಾನ್ಸ್ ಫ್ಯಾಟ್-ಮುಕ್ತ ಕರ್ನಾಟಕ” ನಿರ್ಮಾಣಕ್ಕೆ ಬದ್ಧವಾಗಿದೆ. ಈ ಮೂಲಕ ಭಾರತವನ್ನು ಕೈಗಾರಿಕೆಯಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್ಗಳಿಂದ ಮುಕ್ತಗೊಳಿಸುವ ರಾಷ್ಟ್ರೀಯ ಗುರಿ ಸಾಧನೆಗೆ ಕರ್ನಾಟಕ ಮಹತ್ವದ ಕೊಡುಗೆ ನೀಡಲಿದೆ.





