ಬೆಂಗಳೂರು: ಬಿಡದಿ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದೆ ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆಗೆ ಮುಂದಾದ ಬೆನ್ನಲ್ಲೇ ಸಿಎಂ ಡಿಕೆಶಿ ಈ ಯೋಜನೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ ಎಂದರು.
ನಮ್ಮ ಸರ್ಕಾರ ಪ್ರತಿ ಎಕರೆಗೆ 3 ಕೋಟಿ ರೂ.ಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದುರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ 25 ಲಕ್ಷ ರೂ. ನಿಗದಿಪಡಿಸಿದ್ದರು ಎಂದು ತಿಳಿಸಿದರು.





