ಬೆಂಗಳೂರು: ರಾಜಧಾನಿಯ ಶಿವಾಜಿನಗರ ಪ್ರದೇಶದಲ್ಲಿ ಪಾದಚಾರಿ ಮಾರ್ಗದಲ್ಲಿದ್ದ ಅಕ್ರಮ ಆಕ್ರಮಣಗಳನ್ನು ತೆರವುಗೊಳಿಸಲು ತೆರಳಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಕೋರರ ಪಡೆ ಮಾರಣಾಂತಿಕ ದಾಳಿ ನಡೆಸಿದೆ. ಕಾರ್ಯಾಚರಣೆಗೆ ಅಡ್ಡಿಪಡಿಸಿದ ಗ್ಯಾಂಗ್, ಅಧಿಕಾರಿಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಚೆಲ್ಲಿ, ಬಳಿಕ ಹೆಲ್ಮೆಟ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದೆ.
ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ‘ಎ2 ಮತ್ತು ಇತರ ಅಪರಿಚಿತರ’ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಕಾಯ್ದೆಗಳಡಿ ಎಫ್‌ಐಆರ್ (ಸಂಖ್ಯೆ: 126/2026) ದಾಖಲಿಸಿದ್ದಾರೆ.
ಕಣ್ಣು ಕಾಣದಂತೆ ಮಾಡಿ ಹೆಲ್ಮೆಟ್‌ಗಳಿಂದ ಭೀಕರ ಹಲ್ಲೆ
ಜಿಬಿಎ ಶಿವಾಜಿನಗರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಮಾಧವ್ ರಾವ್ ತಮ್ಮ ತಂಡದೊಂದಿಗೆ ಬಿಎಂಟಿಸಿ ಬಸ್ ನಿಲ್ದಾಣದ ಬಳಿಯಿರುವ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಎದುರಿನ ಫುಟ್‌ಪಾತ್ ತೆರವುಗೊಳಿಸುತ್ತಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಥಳಕ್ಕಾಗಮಿಸಿದ ಇಬ್ಬರು ವ್ಯಕ್ತಿಗಳು ಹಾಗೂ ಅವರ ಜೊತೆಗಿದ್ದ ಗುಂಪು, ಕ್ಷಣಾರ್ಧದಲ್ಲಿ ಅಧಿಕಾರಿಗಳ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಕಣ್ಣು ಉರಿಯಿಂದ ಸಿಬ್ಬಂದಿ ತತ್ತರಿಸುತ್ತಿದ್ದಂತೆ, ಆರೋಪಿಗಳು ತಮ್ಮ ಕೈಯಲ್ಲಿದ್ದ ಹೆಲ್ಮೆಟ್‌ಗಳಿಂದ ಅಧಿಕಾರಿಗಳ ತಲೆ ಹಾಗೂ ದೇಹಕ್ಕೆ ಮನಸೋ ಇಚ್ಛೆ ಬಾರಿಸಿ ರಕ್ತಗಾಯಗೊಳಿಸಿದ್ದಾರೆ.
ಮಹಿಳಾ ಅಧಿಕಾರಿಗಳು, ಸಿಬ್ಬಂದಿಗೆ ಗಂಭೀರ ಗಾಯ
ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ಜಿಬಿಎ ಅಧಿಕಾರಿಗಳಾದ ಮಾಧವ್ ರಾವ್, ಗೌತಮ್, ಹಲಸೂರು ಉಪ ವಿಭಾಗದ ಎಇಇ ಸಾವಿತ್ರಿ, ಶಿವಾಜಿನಗರ ಉಪ ವಿಭಾಗದ ಎಇ ರುಚಿತಾ ಹಾಗೂ ಕಾರ್ಯಾಚರಣೆಯಲ್ಲಿದ್ದ ವಾಹನ ಚಾಲಕ ಸಿದ್ಧಪ್ಪ ರಕ್ತಗಾಯಗೊಂಡಿದ್ದಾರೆ. ಸರ್ಕಾರಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಗಳ ಮೇಲೆಯೂ ಯಾವುದೇ ದಾಕ್ಷಿಣ್ಯವಿಲ್ಲದೆ ಹಲ್ಲೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಲೆಯತ್ನ ಸೇರಿದಂತೆ BNS ಕಠಿಣ ನಿಯಮಗಳಡಿ ದೂರು
ಸಂಸಂತ್ರಸ್ತ ಅಧಿಕಾರಿ ಮಾಧವ್ ರಾವ್ ನೀಡಿದ ದೂರಿನ ಆಧಾರದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಗೀತಾ ರೆಡ್ಡಿ ಅವರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆಯತ್ನ (Section 109(1)), ಸರ್ಕಾರಿ ನೌಕರರ ಮೇಲಿನ ಹಲ್ಲೆ (Section 132), ಮಹಿಳೆಯರ ಗೌರವಕ್ಕೆ ಧಕ್ಕೆ (Section 74), ಕೃತ್ಯ ತಡೆಯಲು ಗಾಯಗೊಳಿಸುವುದು (Section 121(1)) ಹಾಗೂ ಶಾಂತಿ ಭಂಗ ಉಂಟುಮಾಡಿದ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ತಲೆಮರೆಸಿಕೊಂಡಿರುವ ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ





