ವಾಷಿಂಗ್ಟನ್: ಸಾಕಷ್ಟು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಆರಂಭವಾಗಿತ್ತು ಇನ್ನೇನು ಯುದ್ಧ ಶಾಂತಿಯತ್ತ ಸಾಗುತ್ತದೆ ಎನ್ನುವಷ್ಟರಲ್ಲಿಯೇ ಯುದ್ಧ ಮತ್ತೆ ಆರಂಭವಾಗುತ್ತಿತ್ತು. ಆದರೆ ಈಗ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ಮತ್ತೆ ಆರಂಭಗೊಳ್ಳಲಿದ್ದು, ಇರಾನ್ ಮೇಲಿನ ದಾಳಿಗಳನ್ನು ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇಕಡಾ 5 ಕ್ಕೂ ಹೆಚ್ಚು ದಿಢೀರ್ ಕುಸಿತ ಕಂಡಿದ್ದು, ಹಾರ್ಮುಜ್ ಜಲಸಂಧಿ ತೆರೆಯುವ ಭರವಸೆಯಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭವಾಗಿದ್ದು, ಸೆನ್ಸೆಕ್ಸ್ 600 ಅಂಕಗಳ ಭಾರಿ ಜಿಗಿತ ಕಂಡಿದೆ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಶಮನಗೊಂಡು, ಪ್ರಮುಖ ಜಲಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಮತ್ತೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳುವ ಭರವಸೆ ವ್ಯಕ್ತವಾಗಿರುವುದು ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ತಗ್ಗಲು ಮುಖ್ಯ ಕಾರಣವಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಶಾಂತಿ ಮಾತುಕತೆಗಳು ಆರಂಭವಾಗಲಿವೆ ಎಂಬ ವರದಿಗಳ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪತನ ಕಂಡಿವೆ. ಸೋಮವಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ದರ ಒಂದೇ ದಿನ ಬರೋಬ್ಬರಿ ಶೇಕಡಾ 5 ಕ್ಕೂ ಹೆಚ್ಚು ಇಳಿಕೆಯಾಗಿದೆ.
ಇದರ ಬೆನ್ನಲ್ಲೇ, ಒಪ್ಪಂದ ಅಥವಾ ಸಂಪೂರ್ಣ ಶರಣಾಗತಿ. ಇರಾನ್ ಮುಂದಿರೋದು ಎರಡೇ ಆಯ್ಕೆಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಇರಾನ್ ಒಪ್ಪಿಕೊಳ್ಳಲು ಬಯಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ದಶಕಗಳಿಂದ ಅವರು ಉಂಟುಮಾಡುತ್ತಿರುವ ಸಮಸ್ಯೆಗೆ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಅವರು ದೀರ್ಘವಾದ ವಾಗ್ದಾಳಿ ನಡೆಸಿದ್ದಾರೆ. ಇರಾನ್ ದ್ವಂದ್ವ ನಡೆ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಮುಖ ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ನಿಯಂತ್ರಣದ ಬಗ್ಗೆ ಇರಾನಿನ ಹೇಳಿಕೆಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ. ಹಾರ್ಮುಜ್ ಅನ್ನು ಯುಎಸ್ ನೌಕಾಪಡೆ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ ಎಂದು ತಿಳಿಸಿದ್ದಾರೆ.





