ಚಿಕ್ಕಬಳ್ಳಾಪುರದಲ್ಲಿ ಹೆಣ್ಣುಮಗುವೆಂದು 13 ದಿನದ ಹಸುಗೂಸನ್ನೇ ಸಂಪಿಗೆ ಹಾಕಿ ಕೊಂದ ಪಾಪಿ ತಂದೆ

ಚಿಕ್ಕಬಳ್ಳಾಪುರ: ಹೆಣ್ಣು ಮಗು ಹುಟ್ಟಿದ್ದೇ ಮಹಾಪರಾಧ ಎಂಬಂತೆ ಭಾವಿಸಿದ ಪಾಪಿ ತಂದೆಯೊಬ್ಬ, ತನ್ನ 13 ದಿನದ ಎಳೆಯ ಕಂದಮ್ಮನನ್ನು ನೀರಿನ ಸಂಪ್‌ಗೆ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಕರುಳು ಹಿಂಡುವ ಘಟನೆ ನಗರದ ಶಾಂತಿನಗರ ಬಡಾವಣೆಯಲ್ಲಿ ವರದಿಯಾಗಿದೆ.

ಪಾಪಿ ತಂದೆಯ ಸಂಚು

ಇಲ್ಲಿನ ಇಮ್ರಾನ್ ಹಾಗೂ ಮುಸ್ಕಾನ್ ಜೋಡಿಗೆ 13 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗುವಿನ ಆಗಮನದಿಂದ ಅಸಮಾಧಾನಗೊಂಡಿದ್ದ ಇಮ್ರಾನ್, ಜುಲೈ 22ರ ಬುಧವಾರ ತಡರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ತನ್ನ ವಿಕೃತ ರೂಪ ತೋರಿಸಿದ್ದಾನೆ. ಮಲಗಿದ್ದ ಹಸುಗೂಸನ್ನು ಯಾರಿಗೂ ತಿಳಿಯದಂತೆ ಎತ್ತಿಕೊಂಡು ಹೋಗಿ ಮನೆಯ ಅಂಗಳದಲ್ಲಿದ್ದ ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿದ್ದಾನೆ.

ನಾಪತ್ತೆಯ ನಾಟಕ ಆಡಿ ಸಿಕ್ಕಿಬಿದ್ದ ಆರೋಪಿ

ತಡರಾತ್ರಿ ಎಚ್ಚರಗೊಂಡ ತಾಯಿ ಮುಸ್ಕಾನ್‌ಗೆ ಮಗು ಪಕ್ಕದಲ್ಲಿ ಕಾಣಿಸದೆ ಗಾಬರಿಯಾಗಿದ್ದಾರೆ. ಪತಿ ಇಮ್ರಾನ್‌ನನ್ನು ಕೇಳಿದಾಗ “ನನಗೇನೂ ಗೊತ್ತಿಲ್ಲ” ಎಂದು ಹಾರಿಕೆ ಉತ್ತರ ನೀಡಿದ ಆತ, ಬಳಿಕ ಮಗು ಕಾಣೆಯಾಗಿದೆ ಎಂದು ಇಡೀ ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಡುವ ನಾಟಕವಾಡಿದ್ದಾನೆ. ಆದರೆ ಅನುಮಾನಗೊಂಡು ಮನೆಯ ಸಂಪನ್ನು ಪರಿಶೀಲಿಸಿದಾಗ ಕಂದಮ್ಮನ ಶವ ತೇಲುತ್ತಿರುವುದು ಕಂಡುಬಂದಿದೆ.

ಸ್ವಂತ ರಕ್ತವನ್ನೇ ಬಲಿ ಪಡೆದ ಈ ಕ್ರೂರ ತಂದೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others