ತುಮಕೂರಲ್ಲಿ ಎರಡು ಕಾರುಗಳ ನಡುವೆ ಅಪಘಾತ; ಮೂವರು ದುರ್ಮರಣ

ತುಮಕೂರು): ತಾಲೂಕಿನ ಹುಳಿಯಾರು ಗ್ರಾಮದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಘೋರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಹಿರಿಯೂರಿನಿಂದ ಹುಳಿಯಾರು ಕಡೆಗೆ ಸಾಗುತ್ತಿದ್ದ ಓಮ್ನಿ ಕಾರಿಗೆ ಎದುರು ದಿಕ್ಕಿನಿಂದ ಬಂದ ಮತ್ತೊಂದು ಕಾರು ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಓಮ್ನಿ ಕಾರು ರಸ್ತೆಯಿಂದ ಪಕ್ಕಕ್ಕೆ ಉರುಳಿ ಬಿದ್ದಿದ್ದು, ಅದರಲ್ಲಿದ್ದ ವೃದ್ಧ ದಂಪತಿ ಸೇರಿ ಮೂವರು ಜಾಗದಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮೃತರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.

ಮೂವರಿಗೆ ತೀವ್ರ ಗಾಯ: ಜಿಲ್ಲಾಸ್ಪತ್ರೆಗೆ ರವಾನೆ

ಈ ದುರಂತದಲ್ಲಿ ಇಬ್ಬರು ಚಿಕ್ಕ ಮಕ್ಕಳು ಒಳಗೊಂಡಂತೆ ಒಟ್ಟು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಕ್ತದ ಮಡುವಿನಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ, ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹುಳಿಯಾರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಸಹಾಯದೊಂದಿಗೆ ಮೃತದೇಹಗಳನ್ನು ಹೊರತೆಗೆದು ಹುಳಿಯಾರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಸದ್ಯ ಅಪಘಾತದ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Share it :

Leave a Reply

Your email address will not be published. Required fields are marked *