ಮೈಸೂರು: ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ, ಜನರು ಏನೇ ಮಾಡಬೇಕಾದರೂ ಮತದಾನದ ಮೂಲಕ ಉತ್ತರ ಕೊಡುತ್ತಾರೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ಕುರಿತು ಮಾತನಾಡಿದ ಅವರು,ಜನರು ಏನೇ ಮಾಡಬೇಕಾದರೂ ಮತದಾನದ ಮೂಲಕ ಉತ್ತರ ಕೊಡುತ್ತಾರೆ. ಬೇರೆ ದೇಶದಲ್ಲಿ ಅರಾಜಕತೆ ಉಂಟು ಮಾಡಿದಂತೆ ನಮ್ಮ ದೇಶದಲ್ಲಿ ಮಾಡಲು ಸಾಧ್ಯವಿಲ್ಲ ಎಂದರು.ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ಆದಂತೆ ಇಲ್ಲಿಯೂ ಮಾಡಲು ಹೊರಟಿದ್ದಾರೆ. ಆದರೆ ದೇಶದ ಜನತೆ ಇದಕ್ಕೆ ಮಣಿಯುವುದಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಮೂರು ದಶಕಗಳಿಂದ ಅಲ್ಲಿ ಏನಾಗ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನೆರೆಯ ಕೇರಳ ಸೇರಿದಂತೆ ಬೇರೆ ರಾಜ್ಯಗಳ ಜನರನ್ನು ಎನ್‌ಆರ್ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸುತ್ತಾ ಬಂದಿದ್ದಾರೆ.ಮೈಸೂರಿನ ಎನ್‌ಆರ್ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಅದು ಈಗಲೂ ಮುಂದುವರಿಯುವ ಸಾಧ್ಯತೆ ಇದೆ. ಎನ್‌ಆರ್ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯುವ ಸಾಧ್ಯತೆ ಕಡಿಮೆ ಎಂದು ಕಿಡಿಕಾರಿದರು.
ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮರುಪರೀಕ್ಷೆ ನಡೆದು ಫಲಿತಾಂಶವೂ ಪ್ರಕಟವಾಗಿದೆ. ಆದರೂ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಅರಾಜಕತೆ ಸೃಷ್ಟಿಸಲು ಹೊರಟಿದೆ. ಪ್ರತಿಭಟನೆ ಮೂಲಕ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಇದು ಕಾಂಗ್ರೆಸ್‌ನ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ವಾಗ್ದಾಳಿ ನಡೆಸಿದರು.





