ಬೆಂಗಳೂರು: ಕರ್ನಾಟಕದ 25ನೇ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ನೊಣವಿನ ಕೆರೆಯ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಿರಿಸಿದರು. ಹಾಗಾದ್ರೆ ಅವರ ಪ್ರೊಫೈಲ್ ಮುಂದಿದೆ ಓದಿ..
ಇಂದು ಲೋಕಭವನದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕರ್ನಾಟಕದ 25ನೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರೊಫೈಲ್ ಹೀಗಿದೆ..
ರಾಜ್ಯ ರಾಜಕಾರಣದ ಚದುರಂಗದಾಟದಲ್ಲಿ ಅತ್ಯಂತ ಚಾಣಾಕ್ಷ ನಡೆಗಳಿಗೆ ಹೆಸರಾದವರು ಡಿ.ಕೆ. ಶಿವಕುಮಾರ್. ಸೋಲೇ ಇಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಇವರು, ಕೇವಲ ಒಬ್ಬ ಜನಪ್ರತಿನಿಧಿಯಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಅತ್ಯಂತ ಭರವಸೆಯ ಆಪದ್ಬಾಂಧವರಾಗಿದ್ದಾರೆ. ಸಣ್ಣ ಹಳ್ಳಿಯೊಂದರಿಂದ ಆರಂಭವಾದ ಇವರ ಪಯಣ ಇಂದು ಕರ್ನಾಟಕದ ಅತ್ಯುನ್ನತ ಆಡಳಿತ ಗದ್ದುಗೆಯವರೆಗೆ ಬಂದು ತಲುಪಿದೆ.
ಕೃಷಿ ಹಿನ್ನೆಲೆ ಹಾಗೂ ಆರಂಭಿಕ ದಿನಗಳು
೧೯೬೨ರ ಮೇ ೧೫ರಂದು ಇಂದಿನ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದರು. ಗ್ರಾಮೀಣ ಪರಿಸರದಲ್ಲೇ ಬಾಲ್ಯ ಕಳೆದ ಇವರು ಶಾಲಾ ದಿನಗಳಲ್ಲೇ ಸಾರ್ವಜನಿಕ ನಾಯಕತ್ವದ ಕಡೆಗೆ ಆಕರ್ಷಿತರಾಗಿದ್ದರು. ಬೆಂಗಳೂರಿನಲ್ಲಿ ತಮ್ಮ ಉನ್ನತ ವ್ಯಾಸಂಗ ಮುಗಿಸಿದ ಡಿಕೆಶಿ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ.
ಇತಿಹಾಸ ಸೃಷ್ಟಿಸಿದ ಆ ಒಂದು ಸವಾಲು!
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜಾತಕ ಬದಲಾಗಿದ್ದು ೧೯೮೫ರಲ್ಲಿ. ಕೇವಲ ೨೩ ವರ್ಷದ ತರುಣನಾಗಿದ್ದಾಗ ಅಂದಿನ ಪ್ರಭಾವಿ ರಾಜಕಾರಣಿ ಹೆಚ್.ಡಿ. ದೇವೇಗೌಡರ ಎದುರು ಸಾತನೂರು ಕ್ಷೇತ್ರದಿಂದ ಕಣಕ್ಕಿಳಿಯುವ ಧೈರ್ಯ ಮಾಡಿದರು. ಆ ಚುನಾವಣೆಯಲ್ಲಿ ಗೆಲುವು ಸಿಗದಿದ್ದರೂ, ಅವರು ತೋರಿದ ರಾಜಕೀಯ ಧೀರತನ ಹೈಕಮಾಂಡ್ ಕಣ್ಣಿಗೆ ಬಿದ್ದಿತು. ತದನಂತರ ೧೯೯೯ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದರು.
ಸಚಿವ ಸ್ಥಾನಗಳ ಜವಾಬ್ದಾರಿ ಮತ್ತು ಆಡಳಿತ ವೈಖರಿ
೧೯೮೯ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಇವರು, ಎಸ್. ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸಿದರು. ಮುಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿ ಬೆಂಗಳೂರಿನ ಮೂಲಸೌಕರ್ಯಕ್ಕೆ ಒತ್ತು ನೀಡಿದರು. ೨೦೧೩ರ ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಇಂಧನ ಇಲಾಖೆಯನ್ನು ಮುನ್ನಡೆಸಿ, ಸೌರಶಕ್ತಿ ಯೋಜನೆಗಳಿಗೆ (ವಿಶೇಷವಾಗಿ ಪಾವಗಡ ಸೋಲಾರ್ ಪಾರ್ಕ್) ಹೊಸ ರೂಪ ನೀಡಿದ ಕೀರ್ತಿ ಇವರಿಗಿದೆ.
ರಾಷ್ಟ್ರ ರಾಜಕಾರಣದ ಗಮನ ಸೆಳೆದ ನಾಯಕತ್ವ
ಕಾಂಗ್ರೆಸ್ ಪಕ್ಷಕ್ಕೆ ದೇಶದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಎದುರಾದರೂ ಮೊದಲು ನೆನಪಾಗುವುದೇ ಡಿ.ಕೆ. ಶಿವಕುಮಾರ್. ಮಹಾರಾಷ್ಟ್ರ ಮತ್ತು ಗುಜರಾತ್ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಸಕರನ್ನು ಒಗ್ಗಟ್ಟಾಗಿ ಕಾಯ್ದುಕೊಳ್ಳುವಲ್ಲಿ ಇವರು ಪ್ರದರ್ಶಿಸಿದ ತಂತ್ರಗಾರಿಕೆ ಇವರಿಗೆ ರಾಷ್ಟ್ರಮಟ್ಟದಲ್ಲಿ ‘ಟ್ರಬಲ್ ಶೂಟರ್’ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು.
೨೦೨೦ರಲ್ಲಿ ಪಕ್ಷದ ಕಠಿಣ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿ ವಹಿಸಿಕೊಂಡ ಇವರು, ರಾಜ್ಯಾದ್ಯಂತ ‘ಭಾರತ್ ಜೋಡೋ’ ಪಾದಯಾತ್ರೆ ಸೇರಿದಂತೆ ಹಲವು ಬೃಹತ್ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಸಂಘಟಿಸಿದರು. ಇವರ ಈ ಸಂಘಟನಾ ಚಾತುರ್ಯವೇ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಸಾಧಿಸಲು ಪ್ರಮುಖ ಇಂಧನವಾಯಿತು.
ಉಪಮುಖ್ಯಮಂತ್ರಿಯಿಂದ ಮುಖ್ಯಮಂತ್ರಿಯವರೆಗೆ
೨೦೨೩ರಲ್ಲಿ ಸರ್ಕಾರ ರಚನೆಯಾದಾಗ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ತದನಂತರದ ರಾಜಕೀಯ ವಿದ್ಯಮಾನಗಳ ಫಲವಾಗಿ, ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಗದ್ದುಗೆಗೇರಿದ್ದಾರೆ.
ಕುಟುಂಬದ ವಿವರಗಳು
ಡಿ.ಕೆ. ಶಿವಕುಮಾರ್ ಅವರು ೧೯೯೩ರಲ್ಲಿ ಉಷಾ ಅವರನ್ನು ಕೈಹಿಡಿದರು. ಈ ದಂಪತಿಗೆ ಐಶ್ವರ್ಯ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಪುತ್ರನಿದ್ದಾನೆ. ಇವರ ಇಡೀ ಕುಟುಂಬ ರಾಜಕೀಯ ಹಾಗೂ ಉದ್ಯಮ ರಂಗದಲ್ಲಿ ಸಕ್ರಿಯವಾಗಿದೆ.




